ಶಕ್ತಿ ಯೋಜನೆ – ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಜಾರಿಯಾದ ಮೊದಲ ಗ್ಯಾರಂಟಿ ಯೋಜನೆ. ಆದರೆ ಈ ಯೋಜನೆ ಯಶಸ್ವಿಯಾಗಿದೆ ಅಂತಾ ಸರಕಾರವೇನೋ ಹೇಳುತ್ತೆ. ಆದರೆ ಅದನ್ನು ಮುಂದಿನ ಬಹಳ ತಿಂಗಳುಗಳವರೆಗೆ ತೆಗೆದುಕೊಂಡು ಹೋಗೋದೇ ಸವಾಲಾಗಿದೆ. ಏಕೆಂದರೆ ಕೆಎಸ್ಸಾರ್ಟಿಸಿ ಹಲವಾರು ವರ್ಷಗಳಿಂದ ಹತ್ತಾರು ಸಮಸ್ಯೆಗಳಿಂದ ಕಂಗೆಟ್ಟುಹೋಗಿದೆ.
ರಾಜ್ಯದಲ್ಲಿರೋ ನಾಲ್ಕೂ ಸಾರಿಗೆ ಸಂಸ್ಥೆಗಳಲ್ಲಿ ಕಳೆದ 7 ವರ್ಷಗಳಿಂದ ಸಿಬ್ಬಂದಿ ನೇಮಕಾತಿಯೇ ನಡೆದಿಲ್ಲ. ಇನ್ನು ನಾಲ್ಕು ವರ್ಷಗಳಿಂದ ಬಿಎಂಟಿಸಿ ಕೆಲ ಬಸ್ ಖರೀದಿಸಿದ್ದು ಬಿಟ್ಟರೆ ಉಳಿದೆಡೆ ಒಂದೇ ಒಂದು ವಾಹನ ಖರೀದಿಸಿಲ್ಲ. ಆದರೆ, ಶಕ್ತಿ ಯೋಜನೆ ಅನುಷ್ಠಾನದ ನಂತರ ಪ್ರತಿದಿನ ಸಂಚರಿಸುವ ಪ್ರಯಾಣಿಕರ ಸಂಖ್ಯೆ 92 ಲಕ್ಷದಿಂದ 1.14 ಕೋಟಿ ದಾಟಿದೆ. ಹೀಗಾಗಿ ಇರುವ 23 ಸಾವಿರ ಬಸ್‌ಗಳಲ್ಲಿ ಪ್ರತಿ ದಿನ 500 ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದು, ಡಕೋಟಾ ಬಸ್‌ಗಳು ಪ್ರಯಾಣಿಕರನ್ನು ಹೊತ್ತು ಸಾಗುತ್ತಿವೆ.
ಇದು ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳ ಸಂಚಾರಕ್ಕೆ ಸಂಚಕಾರ ತಂದಿಟ್ಟಿದೆ. ಸಾಮರ್ಥ್ಯ ಮೀರಿ ಡಕೋಟಾ ಬಸ್‌ಗಳನ್ನು ಓಡಿಸುತ್ತಿರುವುದು ಸುರಕ್ಷಿತವೇ ಎಂಬ ಪ್ರಶ್ನೆ ಮೂಡಿದೆ. ಇನ್ನು ಶಾಲೆ ಆರಂಭ ಹಾಗೂ ಮುಕ್ತಾಯದ ಸಮಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ಹೆಚ್ಚುವರಿ ಬಸ್ ನೀಡಲು ವಾಹನಗಳೇ ಇಲ್ಲದ್ದರಿಂದ ದೊಡ್ಡಿಯಲ್ಲಿ ನಿಂತ ಕುರಿಗಳಂತೆ ಮಕ್ಕಳು, ವೃದ್ಧರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ ಎಂದು ಅಮೃತ ದೇಸಾಯಿ, ಮಾಜಿ ಶಾಸಕ ವಿಶ್ಲೇಷಿಸಿದ್ದಾರೆ.