ಬೆಳಗಾವಿ: ಬಡವರ ಜೀವ ಹಿಂಡುತ್ತಿರುವ ಮೌಢ್ಯಗಳ ವಿರುದ್ಧದ ಹೋರಾಟದಲ್ಲಿ ಸದಾ ಮಂಚೂಣಿಯಲ್ಲಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಮತ್ತೊಂದು ಐತಿಹಾಸಿಕ ಹೆಜ್ಜೆಯನ್ನು ಇಟ್ಟಿದ್ದಾರೆ.
ಬುದ್ಧ, ಬಸವ ಅಂಬೇಡ್ಕರ್ ಅವರ ಸಿದ್ದಾಂತಗಳ ಮೇಲೆ ನಡೆಯುತ್ತಿರುವ ಸರಳ ಸಜ್ಜನಿಕೆಯ ರಾಜಕಾರಣಿ ಎಂದೇ ಖ್ಯಾತಿ ಪಡೆದಿರುವ ಸತೀಶ ಜಾರಕಿಹೊಳಿ ತಮ್ಮ ಸ್ವಂತ ಬಳಕೆಗಾಗಿ ನೂತನವಾಗಿ ಖರೀದಿಸಿರುವ ವಾಹನದ ಉದ್ಘಾಟನಾ ಮತ್ತು ಚಾಲನಾ ಸಮಾರಂಭವನ್ನು ಸ್ಮಶಾನದಲ್ಲಿ ನಡೆಸುವ ಮೂಲಕ ಮತ್ತೊಮ್ಮೆ ಮನೆ ಮಾತಾಗಿದ್ದಾರೆ. ಭಾರತದ ಇತಿಹಾಸದಲ್ಲಿಯೆ ಯಾವುದೇ ರಾಜಕೀಯ ವ್ಯಕ್ತಿಯೊಬ್ಬ ಇಂತಹ ದಿಟ್ಟ ಹೆಜ್ಜೆಯನ್ನು ತೆಗೆದುಕೊಂಡಿಲ್ಲ.
ಮಹಾ ಮಾನವತಾವಾದಿ ಡಾ. ಬಾಬಾಸಹೇಬ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವಾದ ಡಿ. 6 ರಂದು ಇಲ್ಲಿನ ಸದಾಶಿವ ನಗರದ ಬುದ್ಧ ಬಸವ ಅಂಬೇಡ್ಕರ್ ಶಾಂತಿಧಾಮದಲ್ಲಿ ನಡೆಯುವ ಮೌಢ್ಯ ವಿರೋಧಿ ಕಾರ್ಯಕ್ರಮದಿಂದ ಮೂಢನಂಬಿಕೆಗಳ ವಿರುದ್ಧ ಸೆಡ್ಡು ಹೊಡೆದಿರುವ ಸತೀಶ ಜಾರಕಿಹೊಳಿ ಇದೇ ಸ್ಮಶಾನದಲ್ಲಿ ತಮ್ಮ ನೂತನ ವಾಹನ ಚಾಲನಾ ಸಮಾರಂಭವನ್ನು ನಡೆಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಜುಲೈ 13ರಂದು ಬೆಳಗ್ಗೆ 11 ಗಂಟೆಗೆ ಸ್ಮಶಾನದಲ್ಲಿ ವಿನೂತನ ಕಾರ್ಯಕ್ರಮ ಏರ್ಪಡಿಸಿದ್ದಾರೆ.
ಹೊಸದಾಗಿ ಖರೀದಿಸಿದ ಕಾರನ್ನು ಒಳ್ಳೆಯ ಮೂಹರ್ತ ನೋಡಿ, ದೇವಸ್ಥಾನಕ್ಕೆ ಹೋಗಿ ಪೂಜೆ-ಪುನಸ್ಕಾರ ಮಾಡಿಸುವುದು ನಂಬಿಕೆ. ಆದ್ರೆ ಇದೇ ಮೊದಲ ಬಾರಿಗೆ ಸತೀಶ್ ಜಾರಕಿಹೊಳಿ ನೂತನವಾಗಿ ಖರೀದಿಸಿರುವ KA-49 N-2023 ಪಾರ್ಚುನರ್ ಕಾರನ್ನು ಸ್ಮಶಾನದಲ್ಲಿ ಉದ್ಘಾಟಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ವೈಚಾರಿಕ ಶ್ರೀಗಳಾದ ನಿಜಗುಣಾನಂದ ಮಹಾಸ್ವಾಮಿಗಳು, ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ, ಬಸವರಾಜ ಪಂಡಿತ ಗುರುಗಳು, ಮಲ್ಲಿಕಾರ್ಜುನ ದೇವರು ಸೇರಿದಂತೆ ಸುಮಾರು 10 ಕ್ಕಿಂತ ಹೆಚ್ಚು ಶ್ರೀಗಳು ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ.
ಇನ್ನೂ ಒಂದು ಮುಂದೆ ಹೆಜ್ಜೆ ಇಟ್ಟಿರುವ ಸತೀಶ ಜಾರಕಿಹೊಳಿ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಈ ಕಾರ್ಯಕ್ರಮ ನೇರಪ್ರಸಾರದ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಕೊರೋನಾ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಜನರಿಗೆ ಈ ಕಾರ್ಯಕ್ರಮದ ವಿಕ್ಷಣೆಗಾಗಿ ನೇರ ಪ್ರಸಾರದ ವ್ಯವಸ್ತೆ ಮಾಡಲಾಗಿದೆ.