ಚಿಕ್ಕೋಡಿ: ‘ನಾನು ಚಿಕ್ಕೋಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುವುದಿಲ್ಲ. ವಿಧಾನ ಪರಿಷತ್ ಸದಸ್ಯನಾಗಿ ಇರುತ್ತೇನೆ. ಹೈಕಮಾಂಡ್ ಹೇಳಿದಂತೆ ಕೇಳಲು ನಾನು ಫುಟ್‌ಬಾಲ್ ಅಲ್ಲ’ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ-2 ಪ್ರಕಾಶ ಹುಕ್ಕೇರಿ ಪ್ರಶ್ನಿಸಿದರು.
ತಾಲ್ಲೂಕಿನ ಕೇರೂರು ಗ್ರಾಮದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘2014ರಲ್ಲಿ ರಾಜ್ಯದಲ್ಲಿ ಸಚಿವನಾಗಿದ್ದ ವೇಳೆ ಒಮ್ಮೆ ಒದ್ದರು, ದೆಹಲಿಗೆ ಹೋಗಿ ಬಿದ್ದೆ. ಅಲ್ಲಿಂದ ಒದ್ದರು, ವಿಧಾನ ಪರಿಷತ್‌ಗೆ ಬಂದೆ. ಈಗ ಮತ್ತೆ ಒದೆಯಲು ಮುಂದಾಗಿದ್ದಾರೆ. ಮತ್ತೆ ದೆಹಲಿಗೆ ಹೋಗಿ ಬೀಳಬೇಕೆ?’ ಎಂದು ಪ್ರಶ್ನಿಸಿದರು.
‘ಹೈಕಮಾಂಡ್ ಹೇಳಿದರೂ ಸ್ಪರ್ಧಿಸಲ್ಲ. ಹೈಕಮಾಂಡ್ ಹೇಳಿದ ತಕ್ಷಣ ಹೋಗಲು ಇದೇನು ಫುಟ್‌ಬಾಲ್ ರಾಜ್ಯವೇ? ವರ್ಷಕ್ಕೊಮ್ಮೆ ಎತ್ತ, ಬೇಕಾದತ್ತ ಒದಿಸಿಕೊಳ್ಳಲು ನಾನು ಸಿದ್ಧನಿಲ್ಲ. ಸಿದ್ದರಾಮಯ್ಯ ಹೇಳಿದರೂ ನಿಲ್ಲುವುದಿಲ್ಲ. ಅವರು ಹೇಳಿದ ತಕ್ಷಣ ನಿಲ್ಲುವೆ ಎಂದು ನಾನೇನೂ ಬರೆದು ಕೊಟ್ಟಿದ್ದೇನೆಯೇ’ ಎಂದೂ ಮರು ಪ್ರಶ್ನಿಸಿದರು.