ಹಾಸನ : ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹಾಸನದಿಂದ (Hassan) ಪ್ರಜ್ವಲ್ ರೇವಣ್ಣ (Prajwal Revanna) ಅವರೇ ಅಭ್ಯರ್ಥಿ ಎಂದು ದೊಡ್ಡವರಾದ ದೇವೇಗೌಡರೇ (HDD) ಹೇಳಿದ ಮೇಲೆ ಬೇರಾವುದೇ ಸಂಶಯ ಬರಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡವರು ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದು ಹೇಳಿಕೆ ಕೊಟ್ಟ ಮೇಲೆ ನಾನು ಓಡಾಡಲೇ ಬೇಕು ಎಂದರು.ಒಂದೆರಡು ಬಾರಿ ಅಲ್ಲ, ಈವರೆಗೆ ಜಿಲ್ಲೆಯಲ್ಲಿ ನಡೆದಿರುವ ಎಲ್ಲಾ ಸಭೆ ಹಾಗೂ ಎಲ್ಲಾ ವೇದಿಕೆಗಳಲ್ಲೂ ದೊಡ್ಡವರು ಪ್ರಸ್ತಾವನೆ ಮಾಡಿದ್ದಾರೆ.
ಅವರೇ ಆಶೀರ್ವಾದ ಮಾಡಿದ ಮೇಲೆ ನಾನು ಏನು ಚರ್ಚೆ ಮಾಡಲಿ ಎಂದು ತಿಳಿಸಿದರು.
ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಕೆಲ ಬಿಜೆಪಿ ಮುಖಂಡರು ಫೋನ್ ಮಾಡಿ ನೀವು ಇನ್ಮೇಲೆ ಹೋರಾಟ ಜಾಸ್ತಿ ಮಾಡಬೇಕು ಎಂದು ಹೇಳಿದ್ದಾರೆ. ಅವರೆಲ್ಲಾ ಹೇಳಿದ ಮೇಲೆ ಸಿಟಿಂಗ್ ಎಂಪಿಯಾಗಿ ನಾನು ಕ್ಷೇತ್ರದಾದ್ಯಂತ ಓಡಾಡಲೇಬೇಕು ಎಂದು ಹೇಳಿದರು.ನಾಳೆ ಏನು ತೀರ್ಮಾನ ಆಗುತ್ತೆ ಅನ್ನೋದು ಪ್ರಶ್ನೆಯಲ್ಲ, ಇವತ್ತು ನಾನು ಓಡಾಡಲೇ ಬೇಕು. ಎಲೆಕ್ಷನ್ವರೆಗೂ ಕಾಯಲು ಆಗಲ್ಲ, ನಾಳೆ ಎಲೆಕ್ಷನ್ ಇದೆ ಎಂದು ಇವತ್ತು ಓಡಾಡಲು ಆಗಲ್ಲ. ನನಗೆ ೪,೮೯೦ ಹಳ್ಳಿಗಳು ಬರ್ತವೆ, ಹಾಗಾಗಿ ನಾನು ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಬಿಜೆಪಿ-ಜೆಡಿಎಸ್ ಸೀಟ್ ಹಂಚಿಕೆ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಕುಮಾರಣ್ಣ ಅವರು ನಮ್ಮನ್ನೆಲ್ಲಾ ಲೀಡ್ ಮಾಡ್ತಿದ್ದಾರೆ. ರಾಮಮಂದಿರ ಉದ್ಘಾಟನೆ ಆದ ಮೇಲೆ ದೇವೇಗೌಡರು, ಕುಮಾರಣ್ಣ, ಬಿಜೆಪಿ ಅಧ್ಯಕ್ಷರು, ಮುಖಂಡರು ಕುಳಿತು ಸಭೆ ನಡೆಸಿ ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡ್ತೀವಿ ಅಂದಿದ್ದಾರೆ. ರಾಮಮಂದಿರ ಉದ್ಘಾಟನೆ ಮುಗಿದಿದೆ. ಇನ್ನೊಂದು ವಾರ, ೧೦ ದಿನದಲ್ಲಿ ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ಅಂತಿಮ ನಿರ್ಧಾರ ಮಾಡುತ್ತಾರೆ ಎಂದು ಪ್ರಜ್ವಲ್ ತಿಳಿಸಿದರು.