ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಟಿ ಸಮುದಾಯದ ಮೀಸಲಾತಿಯನ್ನು ಶೇ 3 ರಿಂದ 7 ಕ್ಕೆ ಹೆಚ್ಚಳ ಮಾಡಿರುವುದನ್ನು ಅನುಷ್ಠಾನ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಡಿಗೆ ಹಿಡಿದು ಕೇಳುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಎಸ್ಟಿ ಮೋರ್ಚಾ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾಷಣದಿಂದ ಯಾವುದೇ ಸಮಾಜ ಉದ್ದಾರ ಆಗಿಲ್ಲ.
ಸಮಾಜಿಕ ನ್ಯಾಯ ಕೆಲವೇ ಕೆಲವು ಜನರಿಗೆ ಮೀಸಲಾಗಿದೆ. ಈ ಸಮಾಜದ ಕಡು ಬಡವರಿಗೆ, ಗ್ರಾಮೀಣ ಜನರಿಗೆ ಇದರ ಪ್ರಯೋಜನ ಸಿಕ್ಕಿಲ್ಲ. ಅವರ ಅಪ್ಪನಿಗೆ, ಮಗನಿಗೆ ಸೊಸೆಗೆ ಸಿಕ್ಕಿದೆ. ಸ್ವಾತಂತ್ರ್ಯ ಬಂದು ಎಪ್ಪತೈದು ವರ್ಷ ಆಯಿತು ಸಮಾಜದ ಕಟ್ಟ ಕಡೆಯ ಜನರಿಗೆ ತಲುಪದಿದ್ದರೆ ಯಾವ ರೀತಿಯ ಆಡಳಿತ ನಡೆದಿದೆ ಅಂತ ಯೋಚನೆ ಮಾಡಿ, ಎಸ್ಸಿ ಎಸ್ಟಿಗೆ ಕೇವಲ ಜಾತಿ ಸೇರಿಸಿದರೆ ಹೊರತು ಮೀಸಲಾತಿ ಹೆಚ್ಚಳ ಮಾಡಲಿಲ್ಲ ಎಂದರು.