ಬೆಂಗಳೂರು: ಚುನಾವಣೆಗೆ ಬಾಕಿ ಇರುವ ಡಿಸಿಸಿ ಬ್ಯಾಂಕ್ ಗಳಿಗೆ 8 ವಾರಗಳಲ್ಲಿ ಚುನಾವಣೆ ನಡೆಸುವಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಚುನಾವಣೆ ಬಾಕಿ ಇರುವ ಡಿಸಿಸಿ ಬ್ಯಾಂಕ್ ಗಳನ್ನು ಆಡಳಿತಾಧಿಕಾರಿ ವಹಿಸಿಕೊಳ್ಳಬೇಕು. ಚುನಾವಣೆ ವಿಳಂಬ ಮಾಡಬಾರದು.
8 ವಾರಗಳಲ್ಲಿ ಚುನಾವಣೆ ನಡೆಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗಿಯ ಪೀಠ ಆದೇಶ ನೀಡಿದೆ.
ಅರ್ಹರು, ಅನರ್ಹರ ಪಟ್ಟಿಯಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾ ಅಧಿಸೂಚನೆ ಹಿಂಪಡೆದಿರುವುದನ್ನು ಪ್ರಶ್ನಿಸಿ ಅನೇಕ ಡಿಸಿಸಿ ಬ್ಯಾಂಕುಗಳ ಆಡಳಿತ ಮಂಡಳಿಗಳು ಮೇಲ್ಮನವಿ ಸಲ್ಲಿಸಿವೆ. ಅದೇ ರೀತಿ ಮೈಸೂರು -ಚಾಮರಾಜನಗರ ಡಿಸಿಸಿ ಬ್ಯಾಂಕ್, ದಾವಣಗೆರೆ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗಳಿಗೆ 8 ವಾರಗಳಲ್ಲಿ ಚುನಾವಣೆ ನಡೆಸಲು ಹೈಕೋರ್ಟ್ ನಿರ್ದೇಶನ ನೀಡಿದೆ. ಇದಕ್ಕಾಗಿ ಸಂಬಂಧಿಸಿದ ಎಲ್ಲಾ ಭಾಗಿದಾರರು ಅಗತ್ಯ ಕ್ರಮ ಕೈಗೊಳ್ಳಬೇಕು. ನ್ಯಾಯಾಲಯ ನೀಡಿದ ಎಲ್ಲಾ ಮಧ್ಯಂತರ ಆದೇಶ ವಿಸರ್ಜನೆಗೊಂಡಿದ್ದು, ಸಂಬಂಧಿಸಿದ ಪ್ರಾಧಿಕಾರಗಳು ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಆದೇಶಿಸಿದೆ.