ತುಮಕೂರು : ಇದೇ ಜನೆವರಿ 22 ರಂದು ಅಯೋಧ್ಯೆಯಲ್ಲಿ(Ayodhye) ನಡೆಯಲಿರುವ ರಾಮಲಲ್ಲಾ ಮೂರ್ತಿ(Ramalalla) ಪ್ರಾಣಪ್ರತಿಷ್ಟಾಪನೆ ಮತ್ತು ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳಿಗೆ ಆಮಂತ್ರಣ ತಲುಪಿದೆ.
ಶ್ರೀರಾಮ ಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಂದ ಅಧಿಕೃತ ಆಹ್ವಾನ ಬಂದಿದ್ದು ಈ ಬಗ್ಗೆ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳು ಮಾಹಿತಿ ನೀಡಿದ್ದಾರೆ.
ಜನೆವರಿ 20 ರಂದೇ ಅಯೋಧ್ಯೆ ತಲುಪುವಂತೆ ರಾಮಮಂದಿರ ಟ್ರಸ್ಟ್‌ನಿಂದ ಆಹ್ವಾನ ಬಂದಿದೆ, ಹಾಗೇ ಭದ್ರತಾ ದೃಷ್ಟಿಯಿಂದ 23ರಂದು ವಾಪಸ್ ಹೊರಡುವಂತೆಯೂ ಸೂಚಿಸಲಾಗಿದೆ. ಆಮಂತ್ರಣ ಬಂದಿದ್ದು ಖುಷಿ ತಂದಿದೆ ಆದರೆ 21 ರಂದು ಶಿವಕುಮಾರ್ ಶ್ರೀಗಳ ಪುಣ್ಯ ಸ್ಮರಣೆ ಹಿನ್ನೆಲೆ ರಾಮ ಮಂದಿರ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಸಿದ್ದಗಂಗಾ ಮಠದಿಂದ ಶುಭ ಹಾರೈಕೆ ಪತ್ರ
ರಾಮ ಮಂದಿರ ಲೋಕಾರ್ಪಣೆ ಹಿನ್ನೆಲೆ ಸಿದ್ದಗಂಗಾ ಮಠದಿಂದ ಆಯೋಧ್ಯೆಗೆ ಶುಭ ಹಾರೈಕೆ ಪತ್ರ ರವಾನಿಸಲಾಗಿದೆ. ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿ ಪತ್ರ ರವಾನಿಸಲಾಗಿದೆ. ‘ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಗಮನಾರ್ಹ ಸಾಧನೆಯಾಗಿದೆ, ಭಾರತದ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಮಾತ್ರ ಪ್ರದರ್ಶಿಸದೇ ಏಕತೆ, ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ದೇವಾಲಯ ಪೂರ್ಣಗೊಂಡಿರೋದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ, ರಾಮ ಮಂದಿರದ ವಾಸ್ತುಶಿಲ್ಪದ ವಿನ್ಯಾಸವು ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವಾಗಿರೋದು ಖುಷಿಯಾಗಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.