ರಾಜ್ಯ ಸರ್ಕಾರ ಅಭಿವೃದ್ಧಿ ಮಾಡದೇ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದೆ ಎಂಬ ವಿರೋಧಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಸಿಎಂ ಸಿದ್ದಾರಾಮಯ್ಯ ತಿರುಗೇಟು ನೀಡಿದ್ದಾರೆ.
ಬೆಂಗಳೂರು, (ಡಿಸೆಂಬರ್ 25): ರಾಜ್ಯ ಸರ್ಕಾರ ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದೆ ಎಂದು ವಿರೋಧಪಕ್ಷದ ನಾಯಕರಾದ ಆರ್.ಅಶೋಕ್ (R Ashok) ಹೇಳಿದ್ದಾರೆ.
ಆದರೆ, ಯಾರೋ ಬಿಜೆಪಿ ವಿರೋಧಿಗಳು ಈ ರೀತಿಯ ಹೇಳಿಕೆಯನ್ನು ಅವರ ಬಾಯಿಯಿಂದ ಹೇಳಿಸಿದಂತೆ ಕಾಣುತ್ತಿದೆ. ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ಳೀರಿ? ನರೇಂದ್ರ ಮೋದಿ ಅವರ ನೇತೃತ್ವದ ಕಳೆದ ಒಂಬತ್ತು ವರ್ಷಗಳ ಆಡಳಿತದ ಜಾತಕ ಬಿಡಿಸಿಟ್ಟರೆ ಯಾರು ಕನ್ನಡಿಗರ ತಲೆ ಮೇಲೆ ಕಲ್ಲು ಹಾಕುತ್ತಿದ್ದಾರೆ ಎಂದು ನಿಮಗೂ ಅರಿವಾಗಬಹುದು ಎಂದು ಸಿಎಂ ಸಿದ್ದಾರಾಮಯ್ಯ (Siddaramaiah) ತಿರುಗೇಟು ನೀಡಿದ್ದಾರೆ.
ನಾಡಿಗೆ ಬರಗಾಲ ಬಿದ್ದು ಆರು ತಿಂಗಳುಗಳಾಗಿವೆ. ಬರಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತಾ ಬಂದಿದ್ದೇವೆ. ಪತ್ರ ಬರೆದಿದ್ದೇವೆ, ನಾನೇ ಖುದ್ದಾಗಿ ಹೋಗಿ ಪ್ರಧಾನಿ ಮತ್ತು ಗೃಹಸಚಿವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ಕಂದಾಯ ಮತ್ತು ಕೃಷಿ ಸಚಿವರು ಕೂಡ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಬಂದಿದ್ದಾರೆ. ಡಿಸಿಎಂ ಅವರು ಗೃಹ ಸಚಿವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಅದರೆ, ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ. ನಮಗೆ ಅನ್ನ ನೀಡುವ ರೈತರು ಕನ್ನಡಿಗರಲ್ಲವೇ? ಅವರ ತಲೆ ಮೇಲೆ ಕಲ್ಲು ಹಾಕುತ್ತಿರುವವರು ಯಾರು ಎಂದು ಪ್ರಶ್ನಿಸಿದ್ದಾರೆ.