ಬೆಂಗಳೂರು, ಡಿಸೆಂಬರ್ 24: ಸಚಿವ ರಾಮಲಿಂಗಾರೆಡ್ಡಿ(Ramalingareddy)ಮನೆಯ ಎದುರೇ ವ್ಯಕ್ತಿಯ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ನಗರದ ಲಕ್ಕಸಂದ್ರದಲ್ಲಿ ಸಂಜೆ ಏಳು ಗಂಟೆ ಸುಮಾರಿಗೆ ನಡೆದಿದೆ. ಜೈಪ್ರಕಾಶ್ ಅಲಿಯಾಸ್ ನಾಯಿ ಅಪ್ಪಿ ಮೃತ ವ್ಯಕ್ತಿ. 2006ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಪ್ರಕಾಶ್ ಆರೋಪಿಯಾಗಿದ್ದ. ಹಳೆ ದ್ವೇಷ ಹಿನ್ನೆಲೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಆಡುಗೋಡಿ ಠಾಣೆಯ ಪೊಲೀಸರು ದೌಡಾಯಿಸಿದ್ದಾರೆ.
ಇಂದು ಹನುಮಜಯಂತಿ ಹಿನ್ನೆಲೆ ಲಕ್ಕಸಂದ್ರ ಬಸ್ ನಿಲ್ದಾಣ ಬಳಿಯ ಆಂಜಿನೇಯ ದೇವಸ್ಥಾನದ ಅನ್ನದಾನ ಕಾರ್ಯಕ್ರಮದಲ್ಲಿ ಮೃತ ಜೈಪ್ರಕಾಶ್ ಭಾಗಿಯಾಗಿದ್ದ. ಈ ವೇಳೆ ಕೆಲ ಹೊತ್ತು ಜೈ ಪ್ರಕಾಶ್ನನ್ನ ನಾಲ್ಕೈದು ಜನ ಆರೋಪಿಗಳು ಅಬ್ಸರ್ವ್ ಮಾಡಿದ್ದಾರೆ.
ಏಳು ಗಂಟೆ ಸುಮಾರಿಗೆ ಏಕಾ ಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ. ತಪ್ಪಿಸಿಕೊಳ್ಳೋಕೆ ಕೆಲ ದೂರ ಓಡಿದ್ದಾನೆ. ಈ ವೇಳೆ ವಿಜಯ ಸಾಗರ ಹೋಟೆಲ್ಗೆ ಜೈಪ್ರಕಾಶ್ ನುಗ್ಗಿದ್ದು, ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಹೋಟೆಲ್ನಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಎಸ್ಕೇಪ್ ಆಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.