ಬೆಳಗಾವಿ: ಎಲ್ಲ ಮಠಗಳ ಮಧ್ಯೆ ಆತ್ಮೀಯತೆ ಬಂದರೆ, ಎಲ್ಲ ಧಾರ್ಮಿಕ ಸಂಪ್ರದಾಯಗಳೂ ಒಂದಾದರೆ ದೇಶ ಅಖಂಡವಾಗುತ್ತದೆ. ದೇಶದ ಎಲ್ಲ ಸಮಸ್ಯೆಗಳೂ ಪರಿಹಾರವಾಗುತ್ತವೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ
ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಹಾಗೂ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಹುಕ್ಕೇರಿ ಹಿರೇಮಠದ ಬೆಳಗಾವಿ ಶಾಖೆಯಲ್ಲಿ ಮಂಗಳವಾರ ಹಿರೇಮಠದ ವತಿಯಿಂದ ಸ್ವರ್ಣವಲ್ಲೀ ಶ್ರೀಗಳನ್ನು ಸತ್ಕರಿಸಿ,
ಗೀತಾಭಿಯಾನಾರ್ಣವ ಬಿರುದು ಪ್ರದಾನ ಮಾಡಲಾಯಿತು.
ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಗದ್ಗುರು ಶ್ರೀ ರೇಣುಕಾಚಾರ್ಯರು ಮತ್ತು ಜಗದ್ಗುರು ಶಂಕರಾಚಾರ್ಯರು ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದರೇನೋ ಎನ್ನುವ ಭಾವನೆ ನಮಗೆ ಬರುತ್ತಿದೆ. ಜಾತಿ ಮೀರಿ ಎರಡೂ ಮಠಗಳು ಕೆಲಸ ಮಾಡುತ್ತಿವೆ. ಮಠಗಳ ಮಧ್ಯೆ ಸಾಮರಸ್ಯ ಮೂಡಬೇಕು ಎನ್ನುವುದು ನಮ್ಮ ಭಾವನೆ. ಸ್ವರ್ಣವಲ್ಲೀ ಮಠ ಪೂರ್ಣ ಸುಖ ನೀಡುವ ಮಠವಾಗಿದೆ ಎಂದರು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಮಠದ ಮಠಾ ಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್
ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಭಗವದ್ಗೀತೆಯ ಅಭಿಯಾನವನ್ನು ಕರ್ನಾಟಕದೆಲ್ಲೆಡೆ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ಶ್ರೀಗಳು ನಮ್ಮ ಸನಾತನ ಧರ್ಮದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ
ಎಂದು ಹೇಳಿದರು.