ಬೆಂಗಳೂರು: ಕೋವಿಡ್ ನಿರ್ವಹಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದ್ದು, ನಿರ್ವಹಣೆಗೆ ಸಂಪುಟ ಉಪ ಸಮಿತಿ ರಚಿಸಲಾಗಿದೆ.
ಔಷಧ ಖರೀದಿ, ಮಾಸ್ಕ್ ಕಡ್ಡಾಯ ಸೇರಿದಂತೆ ಎಲ್ಲ ವಿಷಯವನ್ನೂ ಸಮಿತಿ ನಿರ್ಧರಿಸಲಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲೇ ಉಪಸಮಿತಿ ರಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಆರೋಗ್ಯ, ವೈದ್ಯಕೀಯ, ಗೃಹ, ಡಿಸಿಎಂ ಸೇರಿ ಆರೋಗ್ಯ, ವೈದ್ಯಕೀಯ ಇಲಾಖೆ ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಒಳಗೊಂಡ ಸಭೆ ನಡೆಸಲಾಯಿತು. ರಾಜ್ಯದಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮೂವರು ನಮ್ಮ ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಇದ್ದವರು ನಿಧನರಾಗಿದ್ದಾರೆ. ಮೂವರೂ ಕೂಡ ಕೋವಿಡ್ನಿಂದಲೇ ಮೃತಪಟ್ಟರು ಎನ್ನಲಾಗಲ್ಲ. ಇತರ ಆರೋಗ್ಯ ಸಮಸ್ಯೆಗಳೂ ಅವರಿಗಿತ್ತು. ಹೃದಯ, ಕಿಡ್ನಿ, ಶ್ವಾಸಕೋಶ ಸಮಸ್ಯೆ, ಮಧುಮೇಹ ಹಾಗು ಬಿಪಿ ಇತ್ತು. ಈಗಾಗಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವೈದ್ಯಕೀಯ ಇಲಾಖೆ ಪ್ರತ್ಯೇಕವಾಗಿ ಸಭೆ ನಡೆಸಿದೆ. ಈ ಬಗ್ಗೆ ಸಭೆ ನಡೆಸಿ ಸಲಹೆ ಪಡೆದಿದ್ದೇನೆ ಎಂದರು.
ಯಾವುದೇ ಕಾರಣಕ್ಕೂ ಹಿಂದೆ ಮಾಡಿದ ತಪ್ಪು ಮರುಕಳಿಸಬಾರದು. ಆಕ್ಸಿಜನ್, ಬೆಡ್, ವೆಂಟಿಲೇಟರ್ ಕೊರತೆ ಇರಬಾರದು. ಇತರ ರೋಗ ಇರುವವರನ್ನೂ ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆಗೆ ಒಳಪಡಿಸಬೇಕು. ಕೋವಿಡ್ಗೆ ಸಂಬಂಧಿಸಿದ ಚಿಕಿತ್ಸೆಯನ್ನೂ ಮಾಡಬೇಕು. ಔಷಧಿ ಕೊರತೆ ಆಗಬಾರದು, ಯಾರಿಗಾದರೂ ಅಗತ್ಯವಿದ್ದಲ್ಲಿ ವ್ಯಾಕ್ಸಿನ್ ಹಾಕಿ, ವ್ಯಾಕ್ಸಿನ್ ತೆಗೆದುಕೊಳ್ಳದವರಿಗೆ ವ್ಯಾಕ್ಸಿನೇಷನ್ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.