ಚಿಕ್ಕೋಡಿ(ಬೆಳಗಾವಿ): ಸೇವಾ ಖಾಯಮಾತಿಗಾಗಿ ಒತ್ತಾಯಿಸಿ ಕಳೆದ 28 ದಿನಗಳಿಂದ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಈ ನಿಟ್ಟಿನಲ್ಲಿ ಸರ್ಕಾರ ಗಮನ ಸೆಳೆಯಲು ರಕ್ತದಾನ ಮಾಡಿ ವಿನೂತನವಾಗಿ ಚಿಕ್ಕೋಡಿಯಲ್ಲಿ ಪ್ರತಿಭಟನೆ ನಡೆಸಿದರು.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಾದ್ಯಂತ ಕಳೆದ ಒಂದು ತಿಂಗಳಿನಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಆಯಾ ತಾಲೂಕು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ರಾಜ್ಯಾದ್ಯಂತ 14 ಸಾವಿರ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶಿಕ್ಷಕರಿಲ್ಲದೆ ಕಾಲೇಜುಗಳು ಬಿಕೋ ಎನ್ನುತ್ತಿವೆ. ಯಾವುದೇ ತರಗತಿಗಳು ನಡೆಯುತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ ಜೊತೆ ಸರ್ಕಾರ ಚೆಲ್ಲಾಟ ಆಡುತ್ತಿದೆ ಎಂದು ವಿದ್ಯಾರ್ಥಿಗಳ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತಿಥಿ ಉಪನ್ಯಾಸಕ ಪರಸಪ್ಪ ಪೂಜಾರಿ ಮಾತನಾಡಿ, ನಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಸರ್ಕಾರ ಗಮನ ಸೆಳೆಯಲು ಹಲವಾರು ರೀತಿಯಲ್ಲಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ನಮ್ಮ ರಕ್ತವನ್ನು ಜಿಗಣೆ ತರ ಹೀರುತ್ತಿದೆ. ಇದರಿಂದ ಬೇರೆಯವರಿಗೆ ಅನುಕೂಲವಾಗಲೆಂದು ನಾವು ರಕ್ತದಾನ ಮಾಡುತ್ತಿದ್ದೇವೆ ಎಂದರು.
ಕಳೆದ 20 ವರ್ಷಗಳಿಂದ ನಮ್ಮ ಬೇಡಿಕೆಗಳಿಗೆ ಸರ್ಕಾರ ಮನ್ನಣೆ ನೀಡಿಲ್ಲ. ನಾವು ಮಾನಸಿಕವಾಗಿ ದೈಹಿಕವಾಗಿ ತುಂಬಾ ಬೆಂದು ನೊಂದು ಹೋಗಿದ್ದೇವೆ. ವಿದ್ಯಾರ್ಥಿಗಳ ಜೀವನ ಬೆಳಗಿಸಿದರೂ ಸರ್ಕಾರ ನಮಗೆ ಸೇವಾ ಭದ್ರತೆ ನೀಡುತ್ತಿಲ್ಲ. ನಾವು ಜೀವ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.