ಬೆಂಗಳೂರು : ಶಕ್ತಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.
15-20 ರಷ್ಟು ಹೆಚ್ಚಳವಾಗಿರುವುದರಿಂದ ನಾಲ್ಕು ಸಾರಿಗೆ ನಿಗಮಗಳ ಆದಾಯದಲ್ಲಿಯೂ ಹೆಚ್ಚಳವಾಗಿದೆ. ಹಾಗಾಗಿ ಸದ್ಯದ ಮಟ್ಟಿಗೆ ಬಸ್ ಪ್ರಯಾಣ ದರ ಹೆಚ್ಚಿಸುವ ಪ್ರಸ್ತಾಪದಿಂದ ಸಾರಿಗೆ ನಿಗಮಗಳು ದೂರ ಸರಿದಿವೆ. ಉಚಿತ ಟಿಕೆಟ್ ದರದ ಮೊತ್ತ ರೀ ಎಂಬರ್ಸ್ ಮೆಂಟ್ ಸರಿಯಾಗಿ ಮಾಡಿದಲ್ಲಿ ಸಾರಿಗೆ ನಿಗಮಗಳ ನಿರ್ವಹಣೆಗೆ ಯಾವುದೇ ತೊಂದರೆ ಆಗಲ್ಲ. ಟಿಕೆಟ್ ದರ ಪರಿಷ್ಕರಣೆ ಪ್ರಸ್ತಾಪದ ಪ್ರಮೇಯವೂ ಎದುರಾಗಲ್ಲ ಎನ್ನುವ ಲೆಕ್ಕಾಚಾರದಲ್ಲಿ ಸಾರಿಗೆ ನಿಗಮಗಳಿವೆ.
ಕೋವಿಡ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಿಗೆ ಶಕ್ತಿ ಯೋಜನೆ ಆರ್ಥಿಕ ಪುನಶ್ಚೇತನಕ್ಕೆ ಅವಕಾಶ ಕಲ್ಪಿಸಿದೆ. ನಾಲ್ಕೂ ನಿಗಮಗಳಲ್ಲಿ ಶಕ್ತಿ ಯೋಜನೆ ಪರಿಣಾಮವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.15-20 ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳು ಆದಾಯ ವೃದ್ಧಿಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಹಾಗಾಗಿ ಯಾವುದೇ ಸಾರಿಗೆ ನಿಗಮ ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾಪಕ್ಕೆ ಮುಂದಾಗಿಲ್ಲ. ಹೊಸ ಬಸ್ಗಳ ಖರೀದಿ, ಹಳೆ ಬಸ್ಗಳ ದುರಸ್ತಿ ಕಾರ್ಯ ನಡೆದಿದ್ದರೂ ಬಸ್ ಟಿಕೆಟ್ ದರ ಪರಿಷ್ಕರಣೆ ಕುರಿತು ಸಾರಿಗೆ ನಿಗಮಗಳು ಯಾವುದೇ ಆಲೋಚನೆ ಮಾಡಿಲ್ಲ. ಹಾಗಾಗಿ ಶಕ್ತಿ ಯೋಜನೆಯ ಕಾರಣದಿಂದಾಗಿ ಸದ್ಯದ ಮಟ್ಟಿಗೆ ಬಸ್ ಪ್ರಯಾಣ ದರದಲ್ಲಿ ಹೆಚ್ಚಳ ಇಲ್ಲವಾಗಿದೆ.
ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡುವ ಶಕ್ತಿ ಯೋಜನೆ ಜಾರಿಯಾದ ನಂತರ ನಮ್ಮ ಸಾರಿಗೆ ನಿಗಮಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ರಾಜ್ಯ ಸರ್ಕಾರ ರೀ ಎಂಬರ್ಸ್ ಮೆಂಟ್ನಲ್ಲಿ ಅಷ್ಟು ಹಣ ಕೊಟ್ಟರೆ ನಮಗೆ ಇನ್ನಷ್ಟು ಉತ್ತಮವಾಗಿ ಸೇವೆ ನೀಡಲು ಸಾಧ್ಯವಾಗಲಿದೆ. ಹೊಸ ಬಸ್ ಖರೀದಿ ಮಾಡಬಹುದು ಎಂದರು.