ಕಲಬುರಗಿ: ಚಾಕು ತೋರಿಸಿ ಬೇದರಿಕೆ ಹಾಕಿ ಅಪ್ರಾಪ್ತೆ ಮೇಲೆ ಇಬ್ಬರು ಬಾಲಕರು ಅತ್ಯಾಚಾರ ಎಸಗಿರುವ ಘಟನೆ ಜಿಲ್ಲೆಯ ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಬಾಲಕಿ ಕುಟುಂಬಸ್ಥರು ದುಡಿಯಲು ಮುಂಬೈಗೆ ತೆರಳಿದ್ದು, ವಿದ್ಯಾಭ್ಯಾಸಕ್ಕಾಗಿ ಹತ್ತು ವರ್ಷದ ಬಾಲಕಿ ಸಂಬಂಧಿಕರ ಮನೆಯಲ್ಲಿದ್ದಾಳೆ. ಹೀಗಿರುವಾಗ 14 ಮತ್ತು 16 ವರ್ಷದ ಇಬ್ಬರು ಬಾಲಕರು ಸೇರಿ ಬಾಲಕಿಗೆ ಮಾರಕಾಸ್ತ್ರ ತೋರಿಸಿ ಹೆದರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಅತ್ಯಾಚಾರ ಮಾಡಿರುವ ದೃಶ್ಯ ತಮ್ಮ ಮೊಬೈಲ್ನಲ್ಲಿ ವಿಡಿಯೋ ಕೂಡಾ ಮಾಡಿದ್ದರು. ಈ ಕುರಿತು ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಪ್ರತ್ಯೇಕ ಅಪಘಾತ, ಇಬ್ಬರು ಸಾವು: ತಾಜ್ ಸುಲ್ತಾನಪುರ ರಿಂಗ್ ರಸ್ತೆ ಮತ್ತು ಹುಮನಾಬಾದ್ ರಸ್ತೆಯ ಆಲಗೂಡ್ ಕ್ರಾಸ್ ಹತ್ತಿರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ಮೈಮೇಲೆ ಲಾರಿ ಹರಿದು ಆಶ್ರಯ ಕಾಲೋನಿಯ ನಿವಾಸಿ ಅಂಬರೀಶ ಅಣವೀರಪ್ಪ ಪಡಶೆಟ್ಟಿ (43) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇವರು ಕುಸನೂರ ರಸ್ತೆಯ ಗಾಂಧಿ ಬಜಾರ್ನಲ್ಲಿ ಕೆಲಸ ಮಾಡುತ್ತಿದ್ದರು.
ರಾತ್ರಿ 11ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್ ಮೇಲೆ ಮನೆಯ ಕಡೆಗೆ ಹೊರಟಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಅವರು ನೆಲಕ್ಕೆ ಉರುಳಿದ ಬಿದ್ದಿದ್ದಾರೆ, ಅವರ ಮೇಲೆ ಹಿಂದೆ ಬರುತ್ತಿದ್ದ ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.