ಬೆಳಗಾವಿ : ಬೆಳಗಾವಿಯಲ್ಲಿ ಮಹಿಳೆ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲ್ ಕುಮಾರ್ ಮೀನಾ ಅವರು ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಿ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ನಗರದ ಬಿಮ್ಸ್ ಆಸ್ಪತ್ರೆಯ ಆವರಣದ ಸಖಿ ಒನ್ ಸ್ಟಾಪ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿಯಾದ ಸುನೀಲ್ ಕುಮಾರ್ ಮೀನಾ ಸತತ ಎರಡೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಏನೆಲ್ಲಾ ಘಟನೆ ನಡೆಯಿತು..? ಯಾರೆಲ್ಲಾ ಇದ್ದರು..? ಪೊಲೀಸರು ಯಾವ ರೀತಿ ಸಹಾಯ ಮಾಡಿದರು..? ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಸಂತ್ರಸ್ತೆಯನ್ನು ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸುನೀಲ್ ಕುಮಾರ್ ಮೀನಾ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಸ್ಥಳ ಮಹಜರು ಸಹ ಮಾಡಿದ್ದು, ವರದಿ ಸಿದ್ದಪಡಿಸುತ್ತೇವೆ. ವರದಿ ಸಿದ್ಧಪಡಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದಿಡುತ್ತೇವೆ. ನಂತರ ಆ ವರದಿ ಆಧರಿಸಿ ಪ್ರಕರಣದ ಕುರಿತು ಆಯೋಗ ನಿರ್ಣಯ ಕೈಗೊಳ್ಳಲಿದೆ. ಈ ಪ್ರಕರಣದಲ್ಲಿ ಮಾನವ ಹಕ್ಕುಗಳು ಉಲ್ಲಂಘನೆಯಾದ ಬಗ್ಗೆ ತನಿಖೆ ಮುಂದುವರೆಸಿದ್ದೇವೆ. ಇನ್ನುಳಿದ ವಿಚಾರಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.