ಬೆಂಗಳೂರು,ನ.10- ಭಾರೀ ಹಣಾಹಣಿಯಿಂದ ಕೂಡಿದ್ದ ರಾಜ್ಯದ ಎರಡು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಕುರ್ಚಿ ಇನ್ನಷ್ಟು ಸುಭದ್ರ ಮಾಡಿದೆ. ಒಂದು ವೇಳೆ ಅಪ್ಪಿತಪ್ಪಿಯೂ ರಾಜರಾಜೇಶ್ವರಿನಗರ ಮತ್ತು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರೆ ಸಿಎಂ ಬಿಎಸ್‍ವೈ ಕುರ್ಚಿಗೆ ನಿಸ್ಸಂದೇಹವಾಗಿ ಕಂಟಕ ಎದುರಾಗುತ್ತಿತ್ತು.ಕುರಿ ಹಳ್ಳಕ್ಕೆ ಬಿದ್ದಾಗಲೇ ಹಾಳಿಗೊಂದು ಕಲ್ಲು ಎಂಬಂತೆ ಸೋಲಿನ ಹೊಣೆಯನ್ನು ಯಡಿಯೂರಪ್ಪನವರಿಗೆ ಕಟ್ಟಿ ನಾಯಕತ್ವ ಬದಲಾವಣೆಯಾಗಬೇಕೆಂಬ ಕೂಗಿಗೆ ಬಲ ತುಂಬಲು ಬಿಜೆಪಿಯ ಒಂದು ಗುಂಪು ಸಜ್ಜಾಗಿತ್ತು. ಆದರೆ ಎರಡೂ ಕ್ಷೇತ್ರಗಳಲ್ಲಿ ಕಮಲ ಪಕ್ಷದ ಅಭ್ಯರ್ಥಿಗಳೇ ಗೆಲುವು ಸಾಧಿಸಿರುವುದರಿಂದ ನಾಯಕತ್ವ ಬದಲಾವಣೆ ಎಂಬ ವದಂತಿಗೆ ಪೂರ್ಣ ವಿರಾಮ ಬಿದ್ದಿದ್ದು, ಬಿಎಸ್‍ವೈ 2023ರವರೆಗೂ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಸಂಶಯವೇ ಇಲ್ಲ.
