ಬೆಂಗಳೂರು, ನ.10- ಕೆಮಿಕಲ್ ಫ್ಯಾಕ್ಟರಿಯಲ್ಲಿ ಇಂದು ಬೆಳಗ್ಗೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಹೊಸಗುಡ್ಡದಹಳ್ಳಿಯ ಬಾಪೂಜಿನಗರದ ಮೊದಲನೆ ಮುಖ್ಯರಸ್ತೆಯಲ್ಲಿ ಕೆಮಿಕಲ್ ಫ್ಯಾಕ್ಟರಿ ಇದೆ. ಈ ಕಾರ್ಖಾನೆಯಲ್ಲಿ ಇಂದು ಬೆಳಗ್ಗೆ ನೋಡನೋಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಭಾರೀ ಹೊಗೆ ಆವರಿಸಿದೆ.
ಫ್ಯಾಕ್ಟರಿ ಒಳಗಿದ್ದ ನಾಲ್ಕು ಮಂದಿ ಕಾರ್ಮಿಕರು ಹೊರಗೆ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ನಿರತರಾದರು. ಆದರೆ, ಬೆಂಕಿಯ ತೀವ್ರತೆ ಹೆಚ್ಚಾದ್ದರಿಂದ ಮತ್ತೆ ಎರಡು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿವೆ.
ಬ್ಯಾಟರಾಯನಪುರ ಪೊಲೀಸ್ ಠಾಣೆಯ ಎಸಿಪಿ ಕೃಷ್ಣಕುಮಾರ್, ಇನ್ಸ್‍ಪೆಕ್ಟರ್ ಲಿಂಗರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿದ್ದರಿಂದ ಸ್ಥಳೀಯರು ಕೆಲಕಾಲ ಆತಂಕಗೊಂಡರು. ಫ್ಯಾಕ್ಟರಿ ಬಳಿ ನಿಲ್ಲಿಸಲಾಗಿದ್ದ ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ. ಬೃಹತ್ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳನ್ನು ಪೊಲೀಸರು ಸ್ಥಳಾಂತರಿಸಿದರು.
ಅಗ್ನಿಶಾಮಕ ಸಿಬ್ಬಂದಿ ಮಧ್ಯಾಹ್ನದವರೆಗೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರು. ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ತೆರಳಿ ಪರಿಶೀಲಿಸಿದರು.ಫ್ಯಾಕ್ಟರಿಯಲ್ಲಿ ಸ್ಯಾನಿಟೈಜರ್, ಟಿನ್ನರ್ ತಯಾರಿಸಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಈ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು, ಫ್ಯಾಕ್ಟರಿ ಒಳಗೆ ಕಾರ್ಮಿಕರ್ಯಾರಾದರೂ ಸಿಕ್ಕಿಕೊಂಡಿದ್ದಾರೆಯೇ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಈ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7