ವಿಧಾನಸಭೆ, ಡಿ.15:ಬೆಳಗಾವಿ ಅಧಿವೇಶನದ(Belagavi Session) ಕೊನೆಯ ದಿನವಾದ ಇಂದು ಖಾನಾಪುರ ಕ್ಷೇತ್ರದ ಬಿಜೆಪಿ ಶಾಸಕ ವಿಠಲ ಹಲಗೇಕರ್ (Vitthal Halgekar) ಅವರು ಮರಾಠಿ ಭಾಷೆಯಲ್ಲಿ ಮಾತನಾಡಿದರು. ಇದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.
ವಿಧಾನಸಭೆ ಕಲಾಪದಲ್ಲಿ ಉತ್ತರ ಕರ್ನಾಟಕ ಸಮಸ್ಯೆ ಕುರಿತ ಚರ್ಚೆ ವೇಳೆ ಖಾನಾಪುರ ಶಾಸಕ ವಿಠಲ ಹಲಗೇಕರ್ ಅವರು ಮರಾಠಿಯಲ್ಲಿ ಮಾತನಾಡಿದರು. ಖಾನಾಪುರ ಕ್ಷೇತ್ರದ ಅಂಗನವಾಡಿಗೆ ಮರಾಠಿ ಟೀಚರ್ ನೇಮಕ ಮಾಡುವಂತೆ ಒತ್ತಾಯಿಸಿದರು.
ಕನ್ನಡ ಬಿಟ್ಟು ಮರಾಠಿ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ಕನ್ನಡ ಭಾಷೆ ಬೆಳೆಯಬೇಕಾದರೆ ಬೇರೆ ಭಾಷೆಯನ್ನು ದ್ವೇಷಿಸಬೇಡಿ ಎಂದು ಸವದಿಗೆ ಹಿತವಚನ ನೀಡಿದರು.
ಈ ವೇಳೆ ಎದ್ದುನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೇಗ ಭಾಷಣ ಮುಗಿಸಲು ಹೇಳಿ ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿದರು. ಮಾತು ಮುಂದುವರಿಸಿದ ವಿಠಲ ಹಲಗೇಕರ್, ಸವದಿ ಅವರು ಸದನದಲ್ಲಿ ಕನ್ನಡ ಮಾತಾಡಿ ಹೊರಗೆ ಮರಾಠಿ ಮಾತನಾಡುತ್ತಾರೆ ಎಂದು ಹೇಳಿದರು. ಮತ್ತೆ ಮಧ್ಯಪ್ರವೇಶಿಸಿದ ಸ್ಪೀಕರ್, ಜನವರಿ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತಾಡಿ ಎಂದು ಹಲಗೇಕರ್ಗೆ ಸೂಚಿಸಿದರು.