ಬೆಂಗಳೂರು: ಬರೀ ಕಣ್ಣೀರು ಹಾಕಿದರೆ ಮತದಾರರು ಕರಗುವುದಿಲ್ಲ ಎಂದು ಉಪಚುನಾವಣಾ ಫಲಿತಾಂಶದಲ್ಲಿ ಜಯಗಳಿಸಿರುವ ಮುನಿರತ್ನ ಅವರು ಕಾಂಗ್ರೆಸ್ಸಿನ ಕುಸುಮಾಗೆ ಟಾಂಗ್ ನೀಡಿದ್ದಾರೆ.
ಗೆಲುವು ಸಾಧಿಸಿರುವ ಮುನಿರತ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ರಾಜರಾಜೇಶ್ವರಿ ನಗರದ ಮತದಾರರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿ, ಸತ್ಯ ಮಾತಾಡಿ. ಕೊನೆಯ ಕ್ಷಣದಲ್ಲಿ ನಾನು ಬಳಸದೇ ಇರುವ ಪದವನ್ನು ಬಳಸಿದ್ದೇನೆ ಅಂತ ಕಣ್ಣೀರು ಹಾಕಿದ್ದೀರಲ್ವ ಅದಕ್ಕಿಂತ ದೊಡ್ಡ ತಪ್ಪು ಇನ್ಯಾವುದೂ ಇಲ್ಲ. ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ನನ್ನ ಬಾಯಲ್ಲಿ ಕೊನೆಯುಸಿರು ಇರುವವರೆಗೆ ಯಾವುದೇ ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ. ಅಂತಹ ಪಾಪದ ಕೆಲಸ, ಪಾಪದ ಮಾತುಗಳು ನನ್ನ ಬಾಯಲ್ಲಿ ಬರಲ್ಲ. ಆದರೂ ಅಂತಹ ಪಾಪದ ಪದವನ್ನು ನಾನು ಉಪಯೋಗಿಸಿದ್ದೀನಿ ಎಂದು ಕಣ್ಣೀರು ಹಾಕಿದ್ರಿ. ಹೀಗಾಗಿ ಇನ್ನು ಮುಂದಕ್ಕಾದರೂ ಸತ್ಯ ಮಾತಾಡಿ ಎಂದು ಸಲಹೆ ಎಂದರು.