ಬೆಳಗಾವಿ/ಬೆಂಗಳೂರು: “ನಾನು ಸಂವಿಧಾನಬದ್ಧವಾಗಿ ಕೆಲಸ ಮಾಡುತ್ತೇನೆ.
ಕಿತ್ತು ಬಿಸಾಡುವುದಲ್ಲ, ಜೋಡಿಸುವುದು ನನ್ನ ಜವಾಬ್ದಾರಿ” ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಸಾವರ್ಕರ್ ಫೋಟೋ ತೆರವು ವಿಚಾರವಾಗಿ ಪರೋಕ್ಷ ಸಂದೇಶ ನೀಡಿದರು. ಸುವರ್ಣಸೌಧದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಜೊತೆ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಾವರ್ಕರ್ ಫೋಟೋ ವಿವಾದ ಸಂಬಂಧ ಪ್ರತಿಕ್ರಿಯಿಸಿ, “ಒಂದು ರಥವನ್ನು ಸಾಧ್ಯವಾದರೆ ಮುಂದಕ್ಕೆ ಎಳೆದುಕೊಂಡು ಹೋಗಿ. ಇಲ್ಲವಾದರೆ ಇದ್ದಲ್ಲೇ ಬಿಡಿ. ಆದರೆ ಹಿಂದಕ್ಕೆ ಎಳೆಯುವಂಥ ಕೆಲಸ ಮಾಡಬೇಡಿ ಎಂದು ಅಂಬೇಡ್ಕರ್ ಹೇಳಿದ್ದರು. ಹಿಂದೆ ಆಗಿರುವ ಸರಿ, ತಪ್ಪು ವಿಶ್ಲೇಷಣೆ ಮಾಡುವುದು ಬೇಡ. ಸಂವಿಧಾನಬದ್ಧ ಕೆಲಸ ಮಾಡಬೇಕು. ನನ್ನ ಆದ್ಯತೆ ಜೋಡಿಸುವುದು, ಕೆಡಿಸುವುದಲ್ಲ” ಎಂದರು.
“ಯಲಹಂಕ ಫ್ಲೈಓವರ್ ಕೆಳಗೆ ಜನ ಓಡಾಡುವುದಿಲ್ಲವೇ ಎಂದ ಅವರು, ಸಾವರ್ಕರ್ ನಾಮಕರಣ ಮಾಡಿರುವ ಮೇಲ್ಸೇತುವೆ ಬಗ್ಗೆ ಪ್ರಸ್ತಾಪಿಸಿದರು. ಐನೂರು ಜನರು ಒಂದೊಂದು ವಿಚಾರ ಹೇಳುತ್ತಾರೆ ಎಲ್ಲದಕ್ಕೂ ಉತ್ತರ ಕೊಡಲು ಆಗುತ್ತಾ?. ಪ್ರೀತಿಯಿಂದ ಸಮಾಜವನ್ನು ಗೆಲ್ಲುತ್ತೇವೆ. ಪ್ರೀತಿಯಿಂದ ದೇಶವನ್ನು ಸದೃಢಗೊಳಿಸುತ್ತೇವೆ. ಪ್ರೀತಿಯಿಂದಲೇ ಕರ್ನಾಟಕವನ್ನು ಅಭಿವೃದ್ಧಿಪಡಿಸುತ್ತೇವೆ. ಶಾಸಕರು ಮತ್ತು ಸಚಿವರು ಅವರವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಿ” ಎಂದು ಹೇಳಿದರು.
ಜಂಟಿ ಅಧಿವೇಶನಕ್ಕೆ ಮನವಿ: “ಮುಂದಿನ ವರ್ಷ ಜಂಟಿ ಅಧಿವೇಶನವನ್ನು ಸುವರ್ಣಸೌಧದಲ್ಲಿ ನಡೆಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಒಂದೂ ಜಂಟಿ ಅಧಿವೇಶನ ಇಲ್ಲಿ ನಡೆದಿಲ್ಲ. ಜಂಟಿ ಅಧಿವೇಶನದ ಮೂಲಕ ಸುವರ್ಣಸೌಧವನ್ನು ಹೆಚ್ಚೆಚ್ಚು ಬಳಸಲು ಅನುಕೂಲವಾಗಲಿದೆ. ಶಾಸಕರ ಭವನ ಇಲ್ಲಿ ಸ್ಥಾಪಿಸಲು ಸಿಎಂಗೆ ಮನವಿ ಮಾಡಿದ್ದೇವೆ. ಇದರಿಂದ ವಾಸ್ತವ್ಯದ ಸಮಸ್ಯೆ ಬಗೆಹರಿಯುತ್ತದೆ. ಈ ನಿಟ್ಟಿನಲ್ಲಿ ಹಿಮಾಚಲ ಪ್ರದೇಶ, ಮಹಾರಾಷ್ಟ್ರದ ನಾಗಪುರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ. ಬೆಳಗಾವಿಯಲ್ಲಿ ನಡೆಯುವ ಕಾರ್ಯಕ್ರಮಗಳು ಬೆಂಗಳೂರಲ್ಲಿ ನಡೆಯುವಂತೆ ನಡೆಯಬೇಕು. ಸರ್ಕಾರದ ಮೇಲೆ ಹೊರೆ ಬೀಳದಂತೆ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು