ಬೆಳಗಾವಿ: ಜಾತಿ ಗಣತಿ ಅಂಕಿಅಂಶಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬೆಳಗಾವಿ ಕೊಂಡಸಕೊಪ್ಪ ಸಮೀಪ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚಿತ್ರನಟ ಚೇತನ್ ಆಗಮಿಸಿ ಸಾಥ್ ಕೊಟ್ಟರು.
ಸರ್ಕಾರಿ ವಲಯದ ಖಾಸಗೀಕರಣ ನಿಷೇಧಿಸಬೇಕು. ಸಾಚಾರ್ ವರದಿ ಪರಿಶೀಲಿಸಿ ಅಲ್ಪಸಂಖ್ಯಾತರಿಗೆ ಶೇ. 10ರಷ್ಟು ಮೀಸಲಾತಿ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಸಚಿವ ಮಧು ಬಂಗಾರಪ್ಪ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ವಿಚಾರವನ್ನು ಸಿಎಂ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ನಟ ಚೇತನ್ ಮಾತನಾಡಿ, ಸಿದ್ದರಾಮಯ್ಯನವರು 2015ರಲ್ಲಿ 200 ಕೋಟಿ ಹಣ ಬಿಡುಗಡೆ ಮಾಡಿ, ಜಾತಿ ಗಣತಿ ತಯಾರು ಮಾಡಿದ್ದಾರೆ. 2018ರಲ್ಲಿ ತಯಾರಾಗಿದ್ದರೂ ಕೂಡ ಇನ್ನೂ ಜಾರಿಗೆ ತಂದಿಲ್ಲ. ಅವರ ಉದ್ದೇಶ ಚುನಾವಣೆ ಗೆಲ್ಲುವ ಲೆಕ್ಕಾಚಾರ ಆಗಿತ್ತೇ ಹೊರತು ಜನರ ಪರಿವರ್ತನೆ, ಜನರ ಬದುಕು ಸರಿಪಡಿಸುವುದಲ್ಲ ಎಂದು ಟೀಕಿಸಿದರು.
2018ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ವರದಿಯನ್ನು ಲಿಂಗಾಯತ ಮತ ಛಿದ್ರ ಆಗಬಹುದು ಎಂಬ ಉದ್ದೇಶದಿಂದ ತಯಾರಿಸಿದ್ದರು. ಅದೇ ರೀತಿ ಕೆಳ ಸಮುದಾಯಕ್ಕೆ ನ್ಯಾಯ ಸಿಗಬೇಕಾದ ಜಾತಿಗಣತಿ ವರದಿಯನ್ನೂ ಬಿಡುಗಡೆ ಮಾಡಲಿಲ್ಲ. ಅದಾದ ಮೇಲೆ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಬಿಡುಗಡೆಗೆ ಒತ್ತಡ ಹಾಕಿದರೂ, ಅದು ನಮಗೆ ಸರಿ ಕಾಣಲಿಲ್ಲ. ಈಗ ಅಧಿಕಾರಕ್ಕೆ ಬಂದು 6 ತಿಂಗಳಾದ್ರೂ ಜಾತಿ ಗಣತಿ ವರದಿ ಬಿಡುಗಡೆಗೆ ವಿಳಂಬ ಮಾಡುತ್ತಿದ್ದಾರೆ. ಲಿಂಗಾಯತ ಮತ್ತು ಒಕ್ಕಲಿಗ ಜಾತಿ ಲಾಬಿಗಳ ಅಸಮಾಧಾನಿತರನ್ನು ಉಳಿಸಿಕೊಳ್ಳಲು ಇವತ್ತು ಜಾತಿಗಣತಿಗೆ ಅಡ್ಡ ಬರುತ್ತಿದ್ದಾರೆ ಎಂದು ಚೇತನ್ ಆರೋಪಿಸಿದರು