ಬೆಳಗಾವಿ: ”ನಾನಾಗಿ ದೆಹಲಿಗೆ ಹೋಗುತ್ತಿಲ್ಲ. ದೆಹಲಿ ಕರೆ ಬಂದ ಬಳಿಕ ಹೋಗುತ್ತೇನೆ. ಆಗ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ತೆರಳುತ್ತೇನೆ. ಪಕ್ಷದ ಕಚೇರಿಯಿಂದ ಕರೆ ಬಂದಿದೆ. ವಿ. ಸೋಮಣ್ಣ, ರಮೇಶ್ ಜಾರಕಿಹೊಳಿಗೂ ಹೇಳಿರಬಹದು. ಆದರೆ, ದೆಹಲಿಗೆ ಹೋಗುವುದಂತೂ ನಿಶ್ಚಿತ, ಖಚಿತ” ಎಂದು ಶಾಸಕ ಬಸನಗೌಡ ಯತ್ನಾಳ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ”ಸೋಮಣ್ಣ ಕಾರಣಾಂತರಗಳಿಂದ ಅವರು ಅವರ ತೀರ್ಮಾನವನ್ನು ಮುಂದೂಡಿದ್ದಾರೆ. ಭೇಟಿಯಾದಾಗ ಕರ್ನಾಟಕದ ಪರಿಸ್ಥಿತಿಯನ್ನು ಹೇಳುತ್ತೇನೆ. ಕರ್ನಾಟಕದಲ್ಲಿ ಏನು ನಡೆದಿದೆ. ನಮ್ಮ ಪಕ್ಷ ಈ ಮಟ್ಟಿಗೆ ಬರಲು ಇಬ್ಬರು ಮಹಾನುಭಾವರು ಕಾರಣ. ಒಬ್ಬ ದೆಹಲಿ ಮಹಾನುಭಾವರು. ಇನ್ನೊಬ್ಬರು ಕರ್ನಾಟಕದವರು. ಇಬ್ಬರು ಸಿಂಗ್ಗಳು ಆಗಿದ್ದಾರೆ. ಅವರಿಂದ ಪಕ್ಷವು ಹಾಳಾಗಿದೆ” ಎಂದರು.
”ಹುಬ್ಬಳ್ಳಿ ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಪಕ್ಕದಲ್ಲಿ ಒಬ್ಬ ಐಎಸ್‌ಐಎಸ್ ಜೊತೆ ಸಂಪರ್ಕದಲ್ಲಿ ಇದ್ದವನು ವೇದಿಕೆ ಹಂಚಿಕೊಂಡಿದ್ದಾನೆ” ಎಂದು ಆರೋಪಿಸಿದ್ದಾರೆ. ”ಮುಸ್ಲಿಮರು ಹುಬ್ಬಳ್ಳಿ ಸಭೆಗೆ ಹೋಗಿದ್ದ ಸಿಎಂ ಕಾರ್ಯಕ್ರಮದಲ್ಲಿ ಮೌಲ್ವಿಗಳನ್ನು ನೋಡಿದೆ. ಆ ಮೌಲ್ವಿಗೆ ಪಾಕಿಸ್ತಾನದಿಂದ ಹಣ ಬರುತ್ತಿದೆ. ಐಎಸ್‌ಐಎಸ್ ಸಂಪರ್ಕದಲ್ಲಿ ಇರುವವರು ಆ ವೇದಿಕೆಯಲ್ಲಿ ಇದ್ದರು.
ಸಿದ್ದರಾಮಯ್ಯ ಪಕ್ಕದಲ್ಲಿ ಒಬ್ಬ ಐಎಸ್‌ಐಎಸ್ ಜೊತೆ ಸಂಪರ್ಕದಲ್ಲಿ ಹೊಂದಿರುವ ವ್ಯಕ್ತಿ ಇದ್ದ. ಇಂತವರ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ನಿಮ್ಮ ಬಳಿ ಗುಪ್ತಚರ ಇದೆಯಲ್ಲ ತೆಗೆಸಿ. ನಾನು ಹುಡುಗಾಟಿಕೆ ಮಾತನಾಡುತ್ತಿಲ್ಲ. ಯಾವುದೇ ಸಭೆಗೆ ಸಿಎಂ ಹೋಗ್ತಾರೆ. ಅಂದರೆ, ವೇದಿಕೆಯಲ್ಲಿರುವ ಎಲ್ಲರ ಮಾಹಿತಿ ತೆಗೆದುಕೊಳ್ಳುತ್ತಾರೆ. ಬಿಜಾಪುರದಲ್ಲಿ ಗೋಹತ್ಯೆ ನಿಷೇಧ ಆಗಬೇಕು ಎಂದು ನಾನು ಅಂದಿದ್ದಾಗ ಹೇಳ್ತಿದ್ದೆ. ಆಗ ನನ್ನನ್ನು ಮುಗಿಸಿ ಬಿಡುತ್ತೇನೆ ಅಂದಿದ್ದವನು ಸಿಎಂ ಜೊತೆಗೆ ವೇದಿಕೆ ಮೇಲೆ ಇದ್ದ.
ನಾನು ಈ ಬಗ್ಗೆ ಒಂದು ವಾರದಲ್ಲಿ ಈ ಮಾಹಿತಿಯನ್ನು ಕೊಡುತ್ತೇನೆ. ಕೇಂದ್ರ ಸರ್ಕಾರಕ್ಕೆ ಎಲ್ಲಾ ಮಾಹಿತಿ ನೀಡುತ್ತೇನೆ. ಭಯೋತ್ಪಾದಕರ ಜೊತೆ ನಂಟು ಇರುವವರ ಜೊತೆ ಸಿಎಂ ವೇದಿಕೆ ಹಂಚಿದ್ದು ಖಂಡನೀಯ” ಎಂದರು.