ಬೆಳಗಾವಿ : ಬಿಜೆಪಿ ಮುಖಂಡನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಇಂದು ರಾತ್ರಿಯೇ ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದರೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತ ಬೀದಿಗಳಿಯಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಎಚ್ಚರಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಸ್ಸಿ ಮೋರ್ಚಾ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಹಾಡಹಗಲೇ ಹಲ್ಲೆ ನಡೆಸಲಾಗಿದೆ. ಅವರ ಮನೆಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಗನ್ ಮ್ಯಾನ್ ಮತ್ತು ಬಲಗೈ ಬಂಟ ಸುಜೀತ್ ಜಾಧವ್, ಸದ್ದಾಂ ಇವರೆಲ್ಲರೂ ಸೇರಿಕೊಂಡು ಹೋಗಿ ಹೊರಗಡೆ ಕರೆಸಿ ಮಾತಿನ ಚಕಮಕಿ ಮಾಡಿದ ಬಳಿಕ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಎಂಎಲ್ಸಿ ಕೂಡ ಕಾರಿನಲ್ಲಿ ಕುಳಿತಿದ್ದರು. ಈ ಘಟನೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಈ ಎಂಎಲ್ಸಿ ಬಹಳ ಪ್ರಭಾವಿ ವ್ಯಕ್ತಿ. ಅದರಲ್ಲೂ ಜಿಲ್ಲೆಯ ಪ್ರಭಾವಿ ಸಚಿವೆ ಸಹೋದರ ಆಗಿದ್ದರಿಂದಲೇ ಹಾಡಹಗಲೇ ಮಾರಣಾಂತಿಕ ಹಲ್ಲೆ ಮಾಡಲು ಸಾಧ್ಯವಾಗಿದೆ. ಮೊಬೈಲ್ ಕಿತ್ತುಕೊಂಡು ಚೂರಿ ಇರದಿದ್ದು ಖಂಡನೀಯ ಎಂದು ವಿಜಯೇಂದ್ರ ಕಿಡಿಕಾರಿದರು. ಪೃಥ್ವಿ ಸಿಂಗ್ ಭಯಭೀತಗೊಂಡಿದ್ದಾನೆ. ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದು ಕೇಳಿಕೊಂಡಿದ್ದಾರೆ. ಮನೆಗೆ ನುಗ್ಗಿ ಹಲ್ಲೆ ನಡೆಸಲು ಇವರು ಹೇಸುವುದಿಲ್ಲ ಎಂದು ನನ್ನ ಬಳಿ ಅಳಲು ತೋಡಿಕೊಂಡಿದ್ದಾನೆ ಎಂದು ವಿಜಯೇಂದ್ರ ತಿಳಿಸಿದರು.