ರಾಯಚೂರು ಡಿಸೆಂಬರ್ 3: ಈಕೆಗೆ ಒಂದು ಕಾಲಿನಲ್ಲಿ ಸ್ವಾಧೀನ ಇಲ್ಲ. ಎಲ್ಲರಂತೆ ನಡೆಯಲು ಓಡಾಡಲು ಸಾಧ್ಯವಾಗುವುದಿಲ್ಲ. ಹಾಗಂತ ಈಕೆ ಎಂದೂ ಕೂಡ ಮನೆಯಲ್ಲಿ ಖಾಲಿಯಾಗಿ ಕುಳಿತವಳಲ್ಲ. ಜೀವನದಲ್ಲಿ ತಾನೂ ಕೂಡ ಎಲ್ಲರಂತೆ ಬದುಕು ನಡೆಸಬೇಕು ಅನ್ನೋ ಛಲ ಈಕೆಯದ್ದು. ಹೀಗಾಗಿ ಸ್ವಾವಲಂಬಿ ಜೀವನ ನಡೆಸುವ ಮೂಲಕ ಈ ಮಹಿಳೆ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿದ್ದಾಳೆ.
ಅಷ್ಟಕ್ಕೂ ಆ ಮಹಿಳೆ ಯಾರು? ಎಲ್ಲಿಯವರು? ಈ ಎಲ್ಲಾ ಮಾಹಿತಿಗಾಗಿ ಮುಂದೆ ಓದಿ…
ನಿತ್ಯ ನೂರಾರು ರೊಟ್ಟಿ ಮಾಡುವ ಇವರ ಹೆಸರು ಸುಮಂಗಳಾ. ವಿಕಲಚೇತನರಾದ ಸುಮಂಗಳಾ ಯಾರ ನೆರವು ಪಡೆಯದೇ ರೊಟ್ಟಿ ತಯಾರಿಸಿ ಮಾರಾಟ ಮಾಡುವ ಮೂಲಕ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ. ರಾಯಚೂರು ತಾಲ್ಲೂಕಿನ ದೇವಸೂಗೂರಿನವರಾದ ಸುಮಂಗಳಾ ಅವರಿಗೆ ಎಡಕಾಲು ಅಂಗವೈಕಲ್ಯವಾಗಿದೆ. ಆದರೆ ಈ ಅಂಗವೈಕಲ್ಯವನ್ನು ಮೆಟ್ಟಿನಿಂತು ಅಂಜದೆ ಅಳುಕದೆ ತಮ್ಮ ಜೀವನವನ್ನು ರೂಪಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಸುಮಂಗಳಾ ಅವರು ಮೂಲತಃ ದೇವದುರ್ಗ ತಾಲ್ಲೂಕಿನ ಮಲದಕಲ್‌ನ ತಂದೆ ಲಿಂಗಣ್ಣ ತಾಯಿ ಪಾರ್ವತಮ್ಮ ಅವರ ಮಗಳು. ಸಿರವಾರ ಮಲ್ಲನಗೌಡರೊಂದಿಗೆ ಮದುವೆಗಿದ್ದಾರೆ. ಕೂಲಿ ಜೀವನಕ್ಕಾಗಿ ದೇವಸೂಗೂರು ಗ್ರಾಮಕ್ಕೆ ಬಂದು ನೆಲೆಸಿದವರು. ಸುಮಾರು ವರ್ಷಗಳಿಂದ ವಾಸವಾಗಿರುವ ಅವರು, ಬಡ ಕುಟುಂಬದ ಪರಿಸ್ಥಿತಿ ಅರಿತು ರೊಟ್ಟಿ ತಯಾರಿಸಿ ಮಾರಾಟ ಮಾಡಲು ಕುಟುಂಬದ ನಿರ್ವಹಣೆಗೆ ಸಾಥ್ ನೀಡಿದರು. ಇದೀಗ ನಾಲ್ಕು ಜನರಿಗೆ ಕೆಲಸ ಕೊಡುವಷ್ಟು ಮಟ್ಟಿಗೆ ಬೆಳೆದಿದ್ದಾರೆ.
ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಚಿಕ್ಕ ಸಂಸಾರದ ನೊಗ ಹೊತ್ತು ಚಂದದ ಬದುಕು ರೂಪಿಸಿಕೊಂಡು ತಮಗೆ ಅಂಗವೈಕಲ್ಯವೇ ಇಲ್ಲ ಎಂದು ಸಾಧಿಸಿ ತೋರಿಸಿದ್ದಾರೆ. ಖಾನಾವಳಿ, ಡಾಬಾ , ಸಭೆ , ಸಮಾರಂಭ, ಮದುವೆ ಕಾರ್ಯಕ್ರಮಗಳಿಗೂ ಕ್ವಿಂಟಾಲ್ ಗಟ್ಟಲೇ ರೊಟ್ಟಿ ಮಾರಾಟ ಮಾಡುವ ಸುಮಂಗಳಾ ಅವರು , ಜೊತೆ ಜೊತೆಗೆ ಮೂರ್ನಲ್ಕು ಜನ ಹೆಣ್ಣು ಮಕ್ಕಳಿಗೆ ಕೆಲಸ ಕೊಟ್ಟಿದ್ದಾರೆ. ಅವರಿಗೆ ದಿನಕ್ಕೆ 300 ರಿಂದ 500ರೂಪಾಯಿವರೆಗೆ ಕೂಲಿ ಕೊಟ್ಟು ತಾನು ಬದುಕುತ್ತಾ ಜತೆಗಿದ್ದವರಿಗೆ ನೆರವಾಗಿದ್ದಾರೆ.