ಬೆಳಗಾವಿ: ಡಿಸೆಂಬರ್ 4ರಿಂದ ವಿಧಾನಮಂಡಲ ಚಳಿಗಾಲದ ಅಧಿವೇಶ ಆರಂಭವಾಗಲಿದ್ದು, ಇದಕ್ಕೆ ಪೂರಕವಾಗಿ ಸಕಲ ಸಿದ್ಧತೆಗಳು ನಡೆದಿವೆ. ವಿಧಾನಸಭೆ, ವಿಧಾನ ಪರಿಷತ್ ಸಭಾಂಗಣ, ಮುಖ್ಯಮಂತ್ರಿ, ವಿವಿಧ ಖಾತೆಗಳ ಸಚಿವರ ಕಚೇರಿಗಳು, ಅಧಿಕಾರಿಗಳ ಕೊಠಡಿಗಳನ್ನು ಶುಚಿಗೊಳಿಸಲಾಗಿದೆ.
ಕಾರಿಡಾರ್‌ಗೆ ಬಣ್ಣ ಬಳಿದು, ಇಡೀ ಆವರಣ ಅಂದಗೊಳಿಸಲಾಗಿದೆ.
ಸಿದ್ಧತೆ ಪರಿಶೀಲಿಸಲು ಸುವರ್ಣ ಸೌಧಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಳಪೆ ಕಾಮಗಾರಿ ಮತ್ತು ಅವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.
ಅವರ ನಿರ್ದೇಶನದ ಮೇರೆಗೆ ಸೌಧದಲ್ಲಿರುವ ಒಳಭಾಗದ ಗೋಡೆಗಳಿಗೆ ಬಣ್ಣ ಬಳಿಯಲಾಗಿದೆ. ಮಳೆಯಿಂದ ಪಾಚಿಗಟ್ಟಿದ ಹೊರಭಾಗದ ಗೋಡೆಗಳನ್ನು ನೀರಿನಿಂದ ತೊಳೆಯಲಾಗಿದೆ. ಸ್ವಚ್ಛ ಮಾಡಲಾಗಿದೆ.
‘ಇದೇ ಮೊದಲ ಬಾರಿ ಎಲ್‌ಇಡಿ ಬಣ್ಣದ ದೀಪಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಸಂಜೆವೇಳೆ ಸುವರ್ಣ ಸೌಧವು ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಅಧಿವೇಶನ ಮಾತ್ರವಲ್ಲ;ರಜಾ ದಿನಗಳು ಹಾಗೂ ರಾಷ್ಟ್ರೀಯ ಹಬ್ಬಗಳಂದು ದೀಪಗಳನ್ನು ಬೆಳಗಿಸಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್.ಸೊಬರದ ‘ತಿಳಿಸಿದರು.