ಕೊಪ್ಪಳ:ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ‘ಜೈ ಶ್ರೀರಾಮ’ ಎಂದು ಪಠಿಸುವಂತೆ ಒತ್ತಾಯಿಸಿ 62 ವರ್ಷದ ಅಂಧ ಮುಸ್ಲಿಂ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಗಂಗಾವತಿ ಪಟ್ಟಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಸಂತ್ರಸ್ತ ಹುಸೇನ್ ಸಾಬ್ ಅವರು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ತನಗೆ ಬಲವಂತವಾಗಿ ಬೈಕ್ ಹತ್ತಿಸಿ, ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ನವೆಂಬರ್ 25 ರ ಮಧ್ಯರಾತ್ರಿ ತನ್ನ ಮೇಲೆ ಹಲ್ಲೆ ನಡೆಸಿದ ನಂತರ ದುಷ್ಕರ್ಮಿಗಳು ತಮ್ಮ ಹಣವನ್ನು ಕಿತ್ತುಕೊಂಡು ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಘಟನೆಯ ಬಗ್ಗೆ ಮುಸ್ಲಿಂ ಸಮುದಾಯದ ಜನರು ಆಕ್ರೋಶ ವ್ಯಕ್ತಪಡಿಸಿದರು. ನಂತರ ನವೆಂಬರ್ 30 ರಂದು ಎಫ್‌ಐಆರ್ ದಾಖಲಿಸಲಾಗಿದೆ.
ಯುವಕರು ತನ್ನನ್ನು ನಿಂದಿಸಿದ್ದು ಮಾತ್ರವಲ್ಲದೆ ತಮ್ಮ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಹುಸೇನ್ ಸಾಬ್ ದೂರಿನಲ್ಲಿ ತಿಳಿಸಿದ್ದಾರೆ. “ನನ್ನನ್ನು ಕೊಲ್ಲುವ ಉದ್ದೇಶ ಹೊಂದಿದ್ದರು. ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ನನ್ನ ತಲೆಯನ್ನು ಕಲ್ಲಿನಿಂದ ಒಡೆದು ಹಾಕಲು ಯತ್ನಿಸಿದರು. ನೆರೆಹೊರೆಯಲ್ಲಿದ್ದ ಕುರುಬರು ನನ್ನ ರಕ್ಷಣೆಗೆ ಬಂದರು” ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
“ಅವರ ಬೆನ್ನಿನ ಮೇಲೆ ಗೀರುಗಳು ಮತ್ತು ಅವರ ಮುಖದ ಮೇಲೆ ಇತರ ಗಾಯದ ಗುರುತುಗಳಿದ್ದರೂ, ಬಾಟಲಿಯಿಂದ ಹಲ್ಲೆ ಮಾಡಿದ ಯಾವುದೇ ಲಕ್ಷಣಗಳಿಲ್ಲ. ಇದು ಕೋಮು ಕಾರಣಗಳಿಗಿಂತ ಹೆಚ್ಚಾಗಿ ಹಣಕ್ಕಾಗಿ ಹಲ್ಲೆಯಾಗಿದೆ. ನಾವು ಏನನ್ನೂ ತಳ್ಳಿಹಾಕಿಲ್ಲ ಮತ್ತು ತನಿಖೆಗಳು ನಡೆಯುತ್ತಿವೆ” ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ ತಿಳಿಸಿದ್ದಾರೆ.