ನಗರದ ಮಾತಾ ಆಸ್ಪತ್ರೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ (Female foeticide) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಸರ್ಕಾರಿ ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ.
ಮೈಸೂರಿನ ಹಿಂದಿನ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ರವಿ. ಪಿ ಮತ್ತು ಮೈಸೂರು ತಾಲೂಕು ಆರೋಗ್ಯಾಧಿಕಾರಿ ರಾಜೇಶ್ವರಿ ಅವರನ್ನು ಅಮಾನತು ಮಾಡಲಾಗಿದೆ. ಭ್ರೂಣ ಹತ್ಯೆ ತಡೆಯುವಲ್ಲಿ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಮೈಸೂರಿನ ಮಾತಾ ಆಸ್ಪತ್ರೆ ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆಯ ಕೇಂದ್ರವಾಗಿತ್ತು. ಇತ್ತೀಚೆಗೆ 900 ಹೆಣ್ಣು ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆಸ್ಪತ್ರೆಗೆ ಬೀಗ ಜಡಿಯಲಾಗಿತ್ತು. ಈ ದಂಧೆಯಲ್ಲಿ ಭಾಗಿಯಾಗಿದ್ದ ಮಾತಾ ಆಸ್ಪತ್ರೆಯ ಮಾಲೀಕ, ಪ್ರಮುಖ ಆರೋಪಿ ಚಂದನ್ ಬಲ್ಲಾಳ್ ಸೇರಿ 9 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ರಾಜ್ಯದಲ್ಲಿ ಪತ್ತೆಯಾದ ಭ್ರೂಣ ಹತ್ಯೆ ಜಾಲ ಅತ್ಯಂತ ಭಯಾನಕವಾಗಿದೆ. ಮಗುವಿನ ಲಿಂಗ ಪತ್ತೆ ಹಚ್ಚಿ ಹೆಣ್ಣು ಭ್ರೂಣವನ್ನು ಹತ್ಯೆ ಮಾಡುವ ಈ ಜಾಲದಲ್ಲಿ ಹಲವಾರು ವೈದ್ಯರು, ಲ್ಯಾಬ್‌ಗಳು, ಸ್ಕ್ಯಾನಿಂಗ್ ಸೆಂಟರ್‌ಗಳು ಭಾಗಿಯಾಗಿವೆ. ಮೊದಲು ಈ ಪ್ರಕರಣ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿ ಪತ್ತೆಯಾಯಿತಾದರೂ ಮುಂದೆ ಅದು ಮಂಡ್ಯ ಮತ್ತು ಮೈಸೂರಿನ ಕಡೆಗೆ ವಿಸ್ತರಿಸಿದೆ. ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಭ್ರೂಣ ಹತ್ಯೆ ನಡೆಯುತ್ತಿರುವುದು ಬೆಳಕಿಗೆ ಬರುತ್ತಿದೆ.