ನವದೆಹಲಿ: ಕಳೆದ ಮೇ 19ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಮಹತ್ವದ ಘೋಷಣೆ ಮಾಡಿದಾಗಿನಿಂದ ಈವರೆಗೂ ಶೇ. 97.26 ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂದು (ಡಿ.01) ತಿಳಿಸಿದೆ.
ಮೇ 19ರಂದು 2000 ರೂ. ನೋಟುಗಳ ಚಲಾವಣೆಯನ್ನು ಹಿಂಪಡೆದ ಸಂದರ್ಭದಲ್ಲಿ 2000 ರೂ. ಮುಖಬೆಲೆಯ 3.56 ಲಕ್ಷ ಕೋಟಿ ರೂ. ಚಾಲನೆಯಲ್ಲಿದ್ದವು. ಕೇವಲ 6 ತಿಂಗಳಲ್ಲಿ ತೀವ್ರ ಕುಸಿತಕೊಂಡಿದ್ದು, 2023ರ ನ.30ರ ಹೊತ್ತಿಗೆ 9,760 ಕೋಟಿ ರೂ.ಗೆ ಬಂದು ನಿಂತಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರೀಯ ಬ್ಯಾಂಕ್‌ನ ಕ್ಲೀನ್ ನೋಟ್ ನೀತಿಯ ಭಾಗವಾಗಿ 2023ರ ಮೇ 19ರಂದು ಚಲಾವಣೆಯಲ್ಲಿರುವ 2000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಾಗಿ ಆರ್‌ಬಿಐ ಮಹತ್ವದ ಘೋಷಣೆ ಮಾಡಿತು. ಆರಂಭದಲ್ಲಿ ಸೆ.30ರವರೆಗೆ 2000 ನೋಟನ್ನು ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಕಾಲಾವಕಾಶ ಮುಗಿದ ಬಳಿಕ ಅ.7ರವರೆಗೆ ವಿಸ್ತರಿಸಲಾಯಿತು.
ಅ. 9ರಿಂದ ಆರ್‌ಬಿಐ ಕಚೇರಿಗಳು ವಿಶೇಷ ಕೌಂಟರ್‌ಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದರ ಜೊತೆಗೆ ವೈಯಕ್ತಿಕ ಅಥವಾ ಯಾವುದೇ ಘಟಕಗಳಿಂದ 2000 ರೂ. ನೋಟುಗಳನ್ನು ಸ್ವೀಕರಿಸುತ್ತಿದ್ದು, ಅವರವರ ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡುತ್ತಿದೆ.
ಇದಿಷ್ಟೇ ಅಲ್ಲದೆ, ದೇಶದೊಳಗಿನ ಸಾರ್ವಜನಿಕರು ಭಾರತದ ಯಾವುದೇ ಅಂಚೆ ಕಚೇರಿಯಿಂದ ಭಾರತೀಯ ಅಂಚೆ ಮೂಲಕ 2000 ರೂ. ನೋಟುಗಳನ್ನು ಕಳುಹಿಸಬಹುದು. ನೀವು ಕಳುಹಿಸಿದ ನೋಟುಗಳನ್ನು ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಮಾಡಲು ಆರ್‌ಬಿಐ ತನ್ನ ಕಚೇರಿಗಳಿಗೆ ಕಳುಹಿಸಲಿದೆ ಎಂದು ಆರ್‌ಬಿಐ ತಿಳಿಸಿದೆ.
Laxmi News 24×7