ಬೆಂಗಳೂರು:ಭ್ರೂಣ ಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭ್ರೂಣ ಹತ್ಯೆ ಪ್ರಕರಣದಲ್ಲಿ ಲೋಪಗಳು ಕಂಡು ಬಂದರೆ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದರು.
ತಾಲೂಕು ಮತ್ತು ಜಿಲ್ಲೆಯಲ್ಲಿ ಗರ್ಭಿಣಿಯರ ಸಂಖ್ಯೆ ಎಷ್ಟು ಎನ್ನುವುದನ್ನು ಪ್ರತಿ ತಿಂಗಳೂ ಮಾಹಿತಿ ಸಂಗ್ರಹಿಸುವುದು ಕಡ್ಡಾಯ. ಅದರ ಜೊತೆಗೆ ಜನನವಾದ ಪ್ರಕರಣಗಳನ್ನು ತಾಳೆ ಹಾಕಲಾಗುವುದು. ಒಂದು ವೇಳೆ ಗರ್ಭಪಾತವಾಗಿದ್ದರೆ ಯಾವ ಕಾರಣಕ್ಕಾಗಿ ಎನ್ನುವುದನ್ನು ಪತ್ತೆ ಮಾಡಿ ವರದಿ ಮಾಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಪ್ರತಿ ತಿಂಗಳು ಭೇಟಿ ಮಾಡಿ ಪರಿಶೀಲನೆ ಮಾಡಬೇಕು. ಈ ಬಗ್ಗೆ ಆಗಿಂದಾಗ್ಗೆ ಸಭೆಗಳನ್ನು ನಡೆಸಿ ಮಾಹಿತಿ ಪಡೆಯಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಇಲಾಖೆ ಕಾರ್ಯದರ್ಶಿ ಮಟ್ಟದಲ್ಲಿಯೂ ಮಾಹಿತಿ ಪರಿಶೀಲನೆ ಸಭೆ ನಡೆಯಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ತಮ್ಮ ಮಟ್ಟದಲ್ಲಿಯೂ ಕೂಡ ಈ ಬಗ್ಗೆ ಸಭೆ ನಡೆಸಿ ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದರು.