ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳು ಪೂರೈಸಿದೆ. ಆರೋಗ್ಯ ಇಲಾಖೆ ಜವಾಬ್ದಾರಿ ತೆಗೆದುಕೊಂಡ ಬಳಿಕ ಈ ಆರು ತಿಂಗಳ ಅವಧಿಯಲ್ಲಿ ಜನಸಾಮಾನ್ಯರಿಗೆ ತುರ್ತಾಗಿ ಆಗಬೇಕಾದ ಆರೋಗ್ಯ ಸೇವೆಗಳನ್ನು ಸುಧಾರಣೆಯತ್ತ ತರುವ ನಿಟ್ಟಿನಲ್ಲಿ ಹೆಚ್ಚು ಗಮನ ಹರಿಸಿದ್ದೇನೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಸದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಂಬ್ಯುಲೆನ್ಸ್ ಮತ್ತು ಡಯಾಲಿಸಿಸ್. ಈ ಎರಡು ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ನಾನು ಹಳೆಯದನ್ನು ಕೆದಕಲು ಹೋಗುವುದಿಲ್ಲ. ಸಕಾರಾತ್ಮಕ ಚಿಂತನೆಯೊಂದಿಗೆ ಇರುವ ಸಮಸ್ಯೆಗಳನ್ನು ಸರಿಪಡಿಸುವ ಕಡೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಆಂಬ್ಯುಲೆನ್ಸ್ ಸೇವೆ ಬಲಪಡಿಸಲು ಆದ್ಯತೆ: ಜನರ ಆರೋಗ್ಯ ಸೇವೆಗಾಗಿ 262 ಹೊಸ ಆಂಬ್ಯುಲೆನ್ಸ್‌ಗಳು ಸೇರ್ಪಡೆಯಾಗುತ್ತಿವೆ. ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನೂತನ ಆಂಬ್ಯುಲೆನ್ಸ್ಗಳಿಗೆ ಚಾಲನೆ ಸಿಗಲಿದೆ. ಒಟ್ಟು 82,02,88,120 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. 157 BLS – ಬೇಸಿಕ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ಗಳು, 105 ALS – ಸುಧಾರಿತ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್ ಗಳು, ALS ಆಂಬ್ಯುಲೆನ್ಸ್ ಗಳು, ಟ್ರಾನ್ಸ್‌ಪೋರ್ಟ್ ವೆಂಟಿಲೇಟರ್ ಮತ್ತು ಡಿಫಿಬ್ರಿಲೇಟರ್ ಹೊಂದಿವೆ ಎಂದು ಮಾಹಿತಿ ನೀಡಿದರು.