ಹುಬ್ಬಳ್ಳಿ, : ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಆಕ್ಷೇಪಾರ್ಹ ಪದ ಬಳಸಿ ಟೀಕಿಸಿದ ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು, ರಾಹುಲ್ ಗಾಂಧಿಯ ಇಂತಹ ಹೇಳಿಕೆಗಳ ಕಾರಣದಿಂದಲೇ ಕಾಂಗ್ರೆಸ್ ಪಕ್ಷವು ಕಳೆದ ಎರಡೂ ಲೋಕಸಭಾ ಚುನಾವಣೆಗಳಲ್ಲೂ ಅಧಿಕೃತ ವಿರೋಧ ಪಕ್ಷದ ಮಾನ್ಯತೆಯನ್ನೂ ಪಡೆಯಲಾಗದಷ್ಟು ಹೀನಾಯವಾಗಿ ಸೋತಿದೆ ಎಂದರು.
ನರೇಂದ್ರ ಮೋದಿಯವರನ್ನು ಭಾರತ ದೇಶವಷ್ಟೇ ಅಲ್ಲ, ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಹೀಗಿರುವಾಗ ರಾಹುಲ್ ಗಾಂಧಿಯ ಇಂತಹ ಲಘು ಮಾತುಗಳು ಪ್ರತಿಕ್ರಿಯೆ ನೀಡುವುದಕ್ಕೂ ಅರ್ಹವಲ್ಲ. ರಾಹುಲ್ ಗಾಂಧಿ ಇಂತಹ ಅಪ್ರಬುದ್ಧ ಹೇಳಿಕೆಗಳಿಗೇ ಹೆಸರುವಾಸಿ. ಯಾರೋ ಬರೆದುಕೊಟ್ಟಿದ್ದನ್ನು ಓದುವ ರಾಹುಲ್ ಗಾಂಧಿ ಕನಿಷ್ಠ ಪಕ್ಷ ಆ ಬರೆದುಕೊಡಲಿಕ್ಕಾದರೂ ಪ್ರಬುದ್ಧರನ್ನ ನೇಮಿಸಿಕೊಳ್ಳಲಿ. ಇಲ್ಲದಿದ್ದರೆ ರಾಜಕೀಯದ ಘನತೆ ಗೌರವ ಕಾಪಾಡುವುದು ಕಾಂಗ್ರೆಸ್ ಕೈಯಲ್ಲಿ ಸಾಧ್ಯವಿಲ್ಲ. ಇದು ರಾಹುಲ್ ಅವರ ನಡತೆ ಮತ್ತು ಮಾತುಗಳಿಂದಲೇ ತಿಳಿಯುತ್ತಿದೆ. ತಮ್ಮ ನಾಯಕನಂತೆ, ಇತರ ಕಾಂಗ್ರೆಸ್ಸಿಗರೂ ತಮ್ಮ ಭಾಷೆ ಮತ್ತು ನಡವಳಿಕೆಯಲ್ಲಿ ತಮ್ಮ ಪಕ್ಷದ ಘನತೆ ಉಳಿದಿಲ್ಲ ಎಂದು ಸಾಬೀತು ಮಾಡುತ್ತಿದ್ದಾರೆ ಎಂದು ಜೋಶಿ ಟೀಕಿಸಿದರು.
ದೇಶದ ಪ್ರಧಾನಮಂತ್ರಿಗಳ ಬಗ್ಗೆ ಲಘುವಾಗಿ ಮಾತನಾಡಿದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು ಈ ಕೂಡಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರಲ್ಲಿ ಕ್ಷಮೆ ಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಒತ್ತಾಯಿಸಿದರು.
Laxmi News 24×7