ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜಾನಪದ ಕ್ರೀಡೆ ಕಂಬಳ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.
ಗಂಗಾರತಿ ಸೇರಿದಂತೆ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ದೈವಕ್ಕೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಕಂಬಳಕ್ಕೆ ಚಾಲನೆ ನೀಡಲಾಯಿತು. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದಾಜ್ಞೆ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಕ್ಷಿಯಾದರು.
‘ಬೆಂಗಳೂರು ಕಂಬಳ ನಮ್ಮ ಕಂಬಳ’ ಹೆಸರಿನಲ್ಲಿ ನಡೆಯುತ್ತಿರುವ ಉತ್ಸವಕ್ಕೆ 150ಕ್ಕೂ ಹೆಚ್ಚು ಚಾಂಪಿಯನ್ ಕೋಣಗಳ ಜೋಡಿ ಹಾಗೂ ನುರಿತ ಓಟಗಾರರು ಭಾಗಿಯಾಗಿದ್ದಾರೆ. ಮುಸ್ಲಿಂ ಸಮುದಾಯದ 6 ಜೋಡಿ, ಕ್ರಿಶ್ವಿಯನ್ ಸಮುದಾಯದ 4 ಜೋಡಿ ಕೋಣಗಳು ಭಾಗಿಯಾಗಿವೆ. ನಿರೀಕ್ಷೆಗೂ ಮೀರಿ ಕಂಬಳ ಕೋಣಗಳ ನೋಂದಣಿಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿ ಕರಾವಳಿ ಕಂಬಳ ಊರು ಬಿಟ್ಟು ಬೇರೆಯೂರಿಗೆ ಬಂದಿವೆ.
ಊರಿನಿಂದಲೇ ಬಂದಿರುವ ನಾಟಿ ವೈದ್ಯರು ಸೇರಿದಂತೆ ಬೆಂಗಳೂರಿನ ಪಶುವೈದ್ಯರು ಕೋಣಗಳ ಆರೋಗ್ಯದ ಮೇಲ್ವಿಚಾರಣೆ ನಡೆಸಿದ್ದಾರೆ. ಸದ್ಯ ಕಂಬಳಕ್ಕೆ ಸಾಂಕೇತಿಕ ಉದ್ಘಾಟನೆ ಸಿಕ್ಕಿದ್ದು, ಮಧ್ಯಾಹ್ನ 3ರ ವರೆಗೆ ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್ ನಡೆಯಲಿದೆ. 3 ಗಂಟೆಯ ಬಳಿಕವಷ್ಟೇ ಸ್ಪರ್ಧಾಕೂಟ ಪ್ರಾರಂಭವಾಗಲಿದೆ. ಇಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.