ಲಕ್ನೋ: ರೌಡಿ ಶೀಟರ್ ವಿಕಾಸ್ ದುಬೆ ನಂತರ ಉತ್ತರ ಪ್ರದೇಶದಲ್ಲಿ ಇನ್ನೊಬ್ಬ ಗ್ಯಾಂಗ್ ಸ್ಟರ್ ಅನ್ನು ಹತ್ಯೆ ಮಾಡಿದ್ದು, ಇಂದು ಒಂದೇ ದಿನ ಎರಡು ಎನ್‍ಕೌಂಟರ್ ಗಳು ನಡೆದಿವೆ.
ಇಂದು ಮುಂಜಾನೆ ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಇದಾದ ಬಳಿಕ 36 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿ ಪನ್ನಾ ಯಾದವ್‍ನನ್ನು ವಿಶೇಷ ಕಾರ್ಯಪಡೆಯ (ಎಸ್‍ಟಿಎಫ್) ಪೊಲೀಸ್ ಅಧಿಕಾರಿಗಳು ಬಹ್ರೈಚ್‍ನ ಹಾರ್ಡಿ ಪ್ರದೇಶದ ಅಹಿರನ್‍ಪುರ್ವಾ ಗ್ರಾಮದಲ್ಲಿ ಹತ್ಯೆ ಮಾಡಿದ್ದಾರೆ.
ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಪನ್ನಾ ಯಾದವ್ ದರೋಡೆ, ಲೂಟಿ ಮತ್ತು ಸುಲಿಗೆ ಮಾಡಿದ ಸುಮಾರು 36 ಪಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನಿಗಾಗಿ ಪೊಲೀಸರು ಹುಡುಕುತ್ತಿದ್ದು, ಆತನ ಬಗ್ಗೆ ಸುಳಿವು ನೀಡಿದವರಿಗೆ 50 ಸಾವಿರ ರೂ. ಬಹುಮಾನ ನೀಡುವುದಾಗಿ ಘೋಷಣೆ ಕೂಡ ಮಾಡಿದ್ದರು. ಆದರೆ ಇಂದು ಅಹಿರನ್‍ಪುರ್ವಾ ಗ್ರಾಮದಲ್ಲಿ ಆತ ಸಿಕ್ಕಿದ್ದಾಗ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ನಮ್ಮ ಪೊಲೀಸರು ಅವನಿಗೆ ಗುಂಡು ಹೊಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದ ಪನ್ನಾ ಯಾದವ್‍ನನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಆತನ ಅಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಯಾದವ್ ಉತ್ತರ ಪ್ರದೇದ ಅಜಮ್‍ಗರ್, ಗೋರಖ್‍ಪುರ, ಖೇರಿ, ಬಸ್ತಿ, ಮತ್ತು ಮಹಾರಾಜ್‍ಗಂಜ್‍ನಲ್ಲಿ ತನ್ನ ಚಟುವಟಿಕೆ ನಡೆಸುತ್ತಿದ್ದ. ಈ ವಿಷಯ ತಿಳಿದ ನಮ್ಮ ಪೊಲೀಸರು ಆತನನ್ನು ಬಂಧಿಸಲು ಹೋಗಿದ್ದಾರೆ. ಆಗ ಆತ ಪೊಲೀಸರ ಮೇಲೇ ಗುಂಡಿನ ದಾಳಿ ಮಾಡಿದ್ದಾನೆ. ಆಗ ಪೊಲೀಸರು ಆತನನ್ನು ಶೂಟ್ ಮಾಡಿದ್ದಾರೆ ಎಂದು ಎಸ್‍ಪಿ ವಿಫಿನ್ ಮಿಶ್ರಾ ತಿಳಿಸಿದ್ದಾರೆ.
ಜುಲೈ 2ರಂದು ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ವಿಕಾಸ್ ದುಬೆ ಮತ್ತು ಅವನ ಗ್ಯಾಂಗ್ ನಾಪತ್ತೆಯಾಗಿತ್ತು. ವಿಕಾಸ್ ದುಬೆಗಾಗಿ ಉತ್ತರ ಪ್ರದೇಶದ ಪೊಲೀಸರು ನಿರಂತರ ಹುಡುಕಾಟ ನಡೆಸಿದ್ದರು. ಈ ಮಧ್ಯೆ ಉತ್ತರ ಪ್ರದೇಶ ಮತ್ತು ಹರ್ಯಾಣದಲ್ಲಿ ಸಿಕ್ಕ ವಿಕಾಸ್ ದುಬೆಯ ಏಳು ಮಂದಿ ಸಹಚರನ್ನು ಎನ್‍ಕೌಂಟರ್ ಮಾಡಿದ್ದರು. ಇದಾದ ಒಂದು ವಾರದ ನಂತರ ವಿಕಾಸ್ ದುಬೆ ಮಧ್ಯಪ್ರದೇಶದ ಉಜ್ಜೈನ್‍ನಲ್ಲಿರುವ ಮಹಾಕಾಲ ದೇವಸ್ಥಾನದಲ್ಲಿ ಗುರುವಾರ ಸೆರೆಸಿಕ್ಕಿದ್ದ.
ಗುರುವಾರ ಮಧ್ಯಪ್ರದೇಶದಲ್ಲಿ ಸೆರೆಸಿಕ್ಕ ವಿಕಾಸ್ ದುಬೆಯನ್ನು ಇಂದು ಮುಂಜಾನೆ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಎನ್‍ಕೌಂಟರ್ ಮಾಡಿದ್ದಾರೆ. ಮಧ್ಯಪ್ರದೇಶದ ಪೊಲೀಸರಿಂದ ದುಬೆಯನ್ನು ವಶಕ್ಕೆ ಪಡೆದು ಕರೆತರುವ ಸಮಯದಲ್ಲಿ ನಮ್ಮ ವಾಹನ ಅಪಘಾತವಾಗಿ ಪಲ್ಟಿಯಾಗಿತ್ತು. ಈ ವೇಳೆ ದುಬೆ ತಮ್ಮ ಪೊಲೀಸರ ಬಂದೂಕನ್ನು ಕಿತ್ತುಕೊಂಡು ನಮ್ಮ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಆತನನ್ನು ಎನ್‍ಕೌಂಟರ್ ಮಾಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
https://youtu.be/eP5kqN8ixFA