ವಿಜಯಪುರ : ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬುಧವಾರ ಶಾಲಾ ಕಟ್ಟಡದಲ್ಲಿ ನೀರಿನ ವಾಟರ್ ಫಿಲ್ಟರ್ ಟ್ಯಾಂಕ್ ಮಗುವಿನ ಮೇಲೆ ಬಿದ್ದು ಬಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಅವರೊಂದಿಗೆ ಇನ್ನಿತರ ಅಧಿಕಾರಿಗಳು ಜೊತೆಗಿದ್ದರು. ಬಳಿಕ ಮೃತ ಬಾಲಕನ ಮನೆಗೆ ಭೇಟಿ ನೀಡಿ ಆ ಬಾಲಕನ ತಾಯಿಗೆ ಸಾಂತ್ವನ ಹೇಳಿದರು. ಬುಧವಾರ ಇಂಡಿ ಪಟ್ಟಣದ ಆರ್ ಎಂ ಶಹಾ ಶಾಲೆಯಲ್ಲಿ ಕುಡಿಯುವ ನೀರಿನ ಸ್ಟೀಲ್ ಟ್ಯಾಂಕಿನ ತುಕ್ಕು ಹಿಡಿದ ಕಾಲು ಮುರಿದು ಮಾವಿನಹಳ್ಳಿ ಗ್ರಾಮದ ಐದು ವರ್ಷದ ಯುಕೆಜಿ ವಿದ್ಯಾರ್ಥಿ ಶಿವರಾಜ್ ರೋಡಗಿ ಮೇಲೆ ಬಿದ್ದಿತ್ತು.
ಪರಿಣಾಮ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವಕ್ಕೀಡಾಗಿದ್ದ ಬಾಲಕನನ್ನು ಸ್ಥಳೀಯ ಇಂಡಿ ಆಸ್ಪತ್ರೆ ನಂತರ ವಿಜಯಪುರದ ಬಿ.ಎಲ್.ಡಿ.ಈ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರುವಾಗ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದ. ಹೀಗಾಗಿ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದು ಮಗುವಿನ ತಾಯಿ ಗಂಗಾಬಾಯಿ ಅಲವತ್ತುಕೊಂಡಿದ್ದರು.
ಇಂಡಿ ಶಹರ್ ಠಾಣೆಯ ಅಧಿಕಾರಿಗಳು ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಈ ಬಗ್ಗೆ ಮಾತನಾಡಿದ ಅವರು, ನಿನ್ನೆ ಯುಕೆಜಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಮೃತಪಟ್ಟಿರುವುದು ನೋವಿನ ಸಂಗತಿ. ಮೃತನ ತಾಯಿಯನ್ನು ಭೇಟಿಯಾಗಿದ್ದೆ. ಅದೇ ರೀತಿಯಾಗಿ ಸ್ಕೂಲ್ಗೂ ಕೂಡಾ ಭೇಟಿ ನೀಡಿದ್ದೇನೆ. ಈ ಶಾಲೆಯಲ್ಲಿ ಮಕ್ಕಳ ರಕ್ಷಣಾ ನೀತಿ 2016ರ ಅನ್ವಯ ಮಕ್ಕಳ ರಕ್ಷಣಾ ಸಮಿತಿ ರಚನೆ ಮಾಡಿಕೊಂಡಿಲ್ಲ. ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಕೂಡಾ ಅಳವಡಿಸಿಲ್ಲ. ಇಡಿ ಕ್ಯಾಂಪಸ್ಗಳಲ್ಲಿ ಸಿಸಿಟಿವಿ ಕ್ಯಾಮರಾ ಕಾಣಿಸುತ್ತಿದೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಏಕೆ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ ಎಂಬ ಪ್ರಶ್ನೆ ಮೂಡಿತ್ತಿದೆ ಎಂದರು.