ರಾಯಚೂರು: ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ಬಾಗಿಲು ಮುಚ್ಚಿರುವುದರಿಂದ ಜಿಲ್ಲೆಯ ಅತಿಥಿ ಉಪನ್ಯಾಸಕರೊಬ್ಬರು ದಿನಗೂಲಿ ಕುರಿಗಾಯಿಯಾಗಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟ ನಿಭಾಯಿಸಲು ನಿತ್ಯ 200ರೂ ಕೂಲಿಯಂತೆ ಕುರಿ ಮೇಯಿಸಲು ಹೋಗುತ್ತಿದ್ದಾರೆ.
ಕಳೆದ 9 ವರ್ಷಗಳಿಂದ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ದೇವದುರ್ಗ ತಾಲೂಕಿನ ಹುಲಿಗುಡ್ಡ ಗ್ರಾಮದ ವೀರನಗೌಡ ವೇತನವಿಲ್ಲದೇ ಸಂಕಷ್ಟಕ್ಕೆ ಒಳಗಾಗಿ ಕುರಿ ಮೇಯಿಸುತ್ತಿದ್ದಾರೆ. ಎಂಎ, ಬಿಎಡ್ ಪದವೀಧರ ವೀರನಗೌಡ ಸರ್ಕಾರಿ ಪದವಿ ಕಾಲೇಜು ಮಸ್ಕಿಯಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು.
ಇಬ್ಬರು ಮಕ್ಕಳಿರುವ, ಕೂಡು ಕುಟುಂಬದ ವೀರನಗೌಡ ಸಿಇಟಿ ಹಾಗೂ ಕೆಸೆಟ್ ಸಹ ಮಾಡಿಕೊಂಡಿದ್ದಾರೆ. ಕಳೆದ ಆರೇಳು ತಿಂಗಳಿಂದ ವೇತನ ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ವೀರನಗೌಡ ಆರ್ಥಿಕ ಸಂಕಷ್ಟ ನಿಭಾಯಿಸಲು ಕಾಡು, ಮೇಡು ಅಲೆದು ಕುರಿ ಕಾಯುತ್ತಿದ್ದಾರೆ. ಹೀಗಾಗಿ ಸರ್ಕಾರ ಕೂಡಲೇ ಅತಿಥಿ ಉಪನ್ಯಾಸಕರ ಕಡೆ ಗಮನಹರಿಸಬೇಕು ಅಂತ ವೀರನಗೌಡ ಮನವಿ ಮಾಡಿದ್ದಾರೆ.