ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ನಾಯಕರಾಗಿರುವ “ಬ್ಯಾಡ್ ಮ್ಯಾನರ್ಸ್’ ಚಿತ್ರ ನ.24ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ ಹಿಟ್‌ಲಿಸ್ಟ್ ಸೇರಿದೆ. ನಿರ್ದೇಶಕ ಸೂರಿ ಹೊಸ ಲೋಕವನ್ನು ಕಟ್ಟಿಕೊಟ್ಟಿರೋದು ಕಾಣುತ್ತಿದೆ.
ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ನಿರ್ದೇಶಕ ಸೂರಿ “ಬ್ಯಾಡ್ ಮ್ಯಾನರ್ಸ್’ ಬಗ್ಗೆ ಮಾತನಾಡಿದ್ದಾರೆ.
ಬ್ಯಾಡ್ ಮ್ಯಾನರ್ ಆರಂಭ ಹೇಗೆ?
ಅಭಿ ಮಾಡಿರುವ “ಅಮರ್’ ಸಿನಿಮಾ ನಂಗೆ ಇಷ್ಟವಾಗಿತ್ತು. ನಾನು ಆ ಸಿನ್ಮಾನ ಅಭಿ ಪೋರ್ಟ್‌ಪೋಲಿಯೋ ಥರಾನೇ ನೋಡಿದ್ದೆ. ತಡಮಾಡದೇ ದರ್ಶನ್ ಸರ್‌ಗೆ ಫೋನ್ ಮಾಡ್ದೆ. “ಅಭಿಗೆ ಸಿನ್ಮಾ ಮಾಡ್ಬೇಕು ಅಂತಿದ್ದೀನಿ’ ಅಂದೆ. ಅದಕ್ಕೆ ದರ್ಶನ್ ಅವ್ರು “ಮಾಡ್ರೀ ಡೈರೆಕ್ಟ್ರೇ ಚೆನ್ನಾಗಿರುತ್ತೆ. ನಿಮ್ ಸ್ಟೈಲೇ ಬೇರೆ’ ಅಂದ್ರು. ಅಲ್ಲಿಂದ ಒಂದಷ್ಟು ಲೈನ್ ಬರೆದುಕೊಳ್ಳೋಕೆ ಶುರುಮಾಡಿದೆ. ಸೀದಾ ಸುಮಲತಾ ಮೇಡಂ ಅಥವಾ ರಾಕ್‌ಲೈನ್ ಸರ್ ಹತ್ತಿರ ಹೇಳಬಹುದಿತ್ತು. ಆದರೆ ಅವರಿಬ್ಬರ ಜತೆ ಮಾತನಾಡಿ ಒಂದಷ್ಟು ಗ್ಯಾಪ್ ಆಗಿತ್ತು. ಹಾಗಾಗಿ, ದರ್ಶನ್ ಸರ್ ಒಂದೇ ಫೋನ್ ಕಾಲ್‌ನಲ್ಲಿ ಕನೆಕ್ಟ್ ಮಾಡಿದರು.
ಮತ್ತೂಮ್ಮೆ ನಿರ್ಮಾಪಕ ಸುಧೀರ್ ಜೊತೆ ಸಿನಿಮಾ ಮಾಡುತ್ತಿದ್ದೀರಿ?
ಹೌದು, “ಪಾಪ್‌ಕಾರ್ನ್ ಮಂಕಿ ಟೈಗರ್’ ನಂತರ ಸುಧಿ ಜತೆ ಸಿನಿಮಾ ಮಾಡುವ ಪ್ಲ್ರಾನ್ ಆಗಿತ್ತು. ಅವರಿಗೆ ಅಭಿ ಜೊತೆ ಸಿನಿಮಾ ಮಾಡುವ ಬಗ್ಗೆ ಹೇಳಿದೆ. ಅವರೂ ಫುಲ್ ಖುಷಿಯಾದರು. ಸೀದಾ ಅಭಿ ಮನೆಗೆ ಹೋಗಿ ಮೊದಲು ಮಾತನಾಡಿದೆ. ಒಂದೆರಡು ದಿನದ ನಂತರ ಒನ್‌ಲೈನ್ ಹೇಳಿ ಬಂದೆ. ಅಭಿ ಕೂಡ ತಡ ಮಾಡಲಿಲ್ಲ. ಗ್ರೀನ್ ಸಿಗ್ನಲ್ ಕೊಟ್ಟರು.
ಅಭಿ ಲುಕ್ ಇಲ್ಲಿ ಭಿನ್ನವಾಗಿದೆಯಲ್ಲ?
ತುಂಬಾ ವಿಭಿನ್ನವಾಗಿದೆ. ಅಭಿ ಕೆಪಾಸಿಟಿ ಬೇರೇನೆ ಇದೆ. ನನಗೆ ಸ್ಕ್ರೀನ್ ಮೇಲೆ ದೈತ್ಯವಾಗಿ ತೋರಿಸಬೇಕು ಅಂತ ಆಲೋಚನೆ ಇತ್ತು. ಅದಕ್ಕೆ ಅವರ ಬಾಡಿ ಮತ್ತು ಬಾಡಿ ಲಾಂಗ್ವೇಜ್ ಎರಡೂ ಸಾಥ್ ಕೊಡ್ತಿತ್ತು. ಅಂಬರೀಶ್ ಸರ್ ಯಂಗ್ ಲುಕ್‌ನಲ್ಲಿ ಹೇಗೆ ಕಾಣಿ¤ದ್ದರೋ ಅಭಿ ಕೂಡ ಥೇಟ್ ರೆಬೆಲ್ ಥರಾನೇ ಕಾಣ್ತಿದ್ರು ನಂಗೆ.
ಸುಮಲತಾ ಅವರು ಕೊಟ್ಟ ಸಲಹೆ ಏನು?
ಸುಮಲತಾ ಮೇಡಂಗೆ ನಾನು ಸಿನ್ಮಾ ಮಾಡ್ತೀನಿ ಅಂತ ಗೊತ್ತಿತ್ತು ಅಷ್ಟೇ. ಕಥೆ ಕೇಳಿಲ್ಲ, ಏನ್ ನಡೀತಿದೆ ಅಂತಾನೂ ಕೇಳಲಿಲ್ಲ. ಒಮ್ಮೆ ಹಾಗೇ ಮಾತನಾಡುವಾಗ, “ಅಭಿ ತುಂಬಾ ಚೆನ್ನಾಗಿ ನಗ್ತಾನೆ, ಕಣ್ಣು ತುಂಬಾ ಚೆನ್ನಾಗಿದೆ. ಅದನ್ನು ಹೇಗೆ ಕ್ಯಾಪcರ್ ಮಾಡಬಹುದು ನೋಡಿ. ಇನ್ನೊಂದು ವಿಷ್ಯ ಅವನನ್ನ ಕುಣಿಸಿ… ಚೆನ್ನಾಗಿ ಕುಣೀತಾನೆ’ ಅಂದಿದ್ರು. ಅದಾದ ನಂತರ ಮೊನ್ನೆ ಮೊನ್ನೆ ಸಿನ್ಮಾ ನೋಡಿದ್ದಷ್ಟೇ.
ಅಭಿ ನಟನಾ ಸಾಮರ್ಥ್ಯದ ಬಗ್ಗೆ ಹೇಳಿ?
ಮೊದಲು ರುದ್ರನ ಪಾತ್ರ ಏನೇನು ಮಾಡುತ್ತೆ ಅಂತ ಅಭಿಗೆ ಫೀಡ್ ಮಾಡ್ತಾ ಹೋದೆ. ಇನ್ನೊಂದು ಅವರ ಎದುರಿಗೆ ಬರೀ ಸೀನಿಯರ್‌ಗಳನ್ನೇ ಹಾಕಿದ್ದೆ. “ಅವರ ಎದುರು ನಾನೇನು ಮಾಡಬಲ್ಲೆ’ ಎಂಬ ಚಾಲೆಂಜ್ ಬರಬೇಕು ಎಂಬುದು ನಮ್ಮಾಸೆ. ಹೊಸಬರೂ ಒಂದಷ್ಟು ಕಲಾವಿದರು ಇದ್ದಾರೆ. ಅಭಿ ತುಂಬಾ ಹೊತ್ತು ಪ್ರಾಕ್ಟೀಸ್ ಮಾಡ್ಕೊಂಡು ಬರುತ್ತಿದ್ದರು. ಅವರ ತಂದೆಯ ಅನೇಕ ಅಂಶಗಳನ್ನು ನಾನು ಗುರುತಿಸಿದ್ದೀನಿ. ಒಂದೊಂದು ಪೇಜ್ ಡೈಲಾಗ್ ಇದ್ರೂ ಅದನ್ನ ಅವರ ಸ್ಟೈಲ್‌ನಲ್ಲಿ ಹೇಳ್ತಿದ್ರು. ನನ್ನ ಕೈಗೆ ಅಂಬರೀಶಣ್ಣ ಯಂಗ್ ಆಗಿ ಸಿಕ್ಕಿದ್ದಿದ್ರೆ ಏನ್ ಮಾಡ್ತಿದ್ನೋ ಅದನ್ನ ಅಭಿ ಕೈಲಿ ಮಾಡಿದ್ದೀನಿ ಅನ್ನೋ ಸಮಾಧಾನವಿದೆ.
ನಟನೆಯಾಚೆ ನೀವು ಅಭಿಯಲ್ಲಿ ಕಂಡಿದ್ದೇನು?
ಅಭಿ ಚಿಕ್ಕ ವಯಸ್ಸಿನಲ್ಲೇ ಫ್ಯಾನ್ಸ್ ನೋಡಿದ್ದಾರೆ. ಅವರ ಮನೆ ಮುಂದೆ ಪ್ರತಿನಿತ್ಯ ನೂರಾರು ಜನ ಅಂಬರೀಶಣ್ಣನ್ನ ನೋಡೋಕೆ ಬರುತ್ತಿದ್ದರು. ಇನ್ನು ಅಭಿ ಕೂಡಾ ಫಾರಿನ್‌ನಲ್ಲಿದ್ದು ಬಂದಿದ್ದಾರೆ. ಆದರೆ ಯಾವುದೇ ಐಷಾರಾಮಿತನವನ್ನು ಸೆಟ್‌ನಲ್ಲಿ ತೋರಿಸಿಕೊಳ್ಳದೇ ಸೀದಾಸಾದಾ ಆಗಿರುತ್ತಿದ್ದರು.