ಬೆಂಗಳೂರು : ಜಾತಿ ಗಣತಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಬೇಕು ಎಂಬುದು ನಮ್ಮ ಪಕ್ಷದ ನಿಲುವು.
ಆ ನಿಲುವಿಗೆ ನಾವು ಬದ್ಧರಾಗಿದ್ದೇವೆ. ಆದರೆ ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಬೇಕು ಎಂದು ವಿವಿಧ ಸಮುದಾಯಗಳು ಆಗ್ರಹಿಸಿವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದ ಬಳಿ ಇಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಸಿಗಬೇಕು ಎಂದು ಅನೇಕ ಸಮುದಾಯಗಳು ಆಗ್ರಹ ಮಾಡಿವೆ. ಪರಿಶಿಷ್ಟರು, ಪಂಚಮಸಾಲಿ, ವೀರಶೈವರು, ಒಕ್ಕಲಿಗರು ಸೇರಿದಂತೆ ಹಲವರು ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಪಕ್ಷಭೇದ ಮರೆತು ಹೋರಾಟ ಮಾಡಲಾಗುತ್ತಿದೆ. ಕೆಲ ಸಮುದಾಯ ಹಾಗೂ ಅದರ ನಾಯಕರು ಜಾತಿ ಗಣತಿ ಸಮೀಕ್ಷೆ ವೇಳೆ ನಮ್ಮನ್ನು ಸಂಪರ್ಕಿಸಿಲ್ಲ. ಹೀಗಾಗಿ ಸಮೀಕ್ಷೆಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ಕೇಳುತ್ತಿವೆ ಎಂದು ತಿಳಿಸಿದರು.
ನೀವು ಕೂಡ ಪತ್ರಕ್ಕೆ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ರವಾನಿಸಿದ್ದೀರಾ ಎಂದು ಕೇಳಿದ ಪ್ರಶ್ನೆಗೆ, “ನಾನು ಸಹಿ ಮಾಡಬಾರದೇ? ಎಷ್ಟು ಜನ ಮಂತ್ರಿಗಳು ಈ ವಿಚಾರವಾಗಿ ಸಭೆ ಮಾಡಿಲ್ಲ? ಅದೇ ರೀತಿ ನಾನು ರಾಜಕೀಯ ಪಕ್ಕಕ್ಕಿಟ್ಟು ನಮ್ಮ ಸಮಾಜ, ಅದರ ಗೌರವ, ಅಭಿಮಾನ ಉಳಿಸಿಕೊಳ್ಳಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದೇನೆ. ಇದು ಎಲ್ಲಾ ನಾಯಕರಲ್ಲೂ ಇರುತ್ತದೆ” ಎಂದು ಡಿಸಿಎಂ ಹೇಳಿದರು.
Laxmi News 24×7