ಬೆಂಗಳೂರು : ನಗರದಲ್ಲಿ ಇತ್ತೀಚೆಗೆ ವಿದ್ಯುತ್ ಅವಘಡದಲ್ಲಿ ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಬೂಬುಗಳನ್ನು ಹೇಳುವುದನ್ನು ಬಿಟ್ಟು ನೈತಿಕ ಹೊಣೆ ಹೊತ್ತು ಇಂಧನ ಸಚಿವ ಕೆ ಜೆ ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಆರ್.
ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವೈರ್ಗಳಿಗೆ ಇಲಿ ಕಚ್ಚಿ ಘಟನೆ ಸಂಭವಿಸಿದೆ ಎಂಬ ನೆಪ ಹೇಳಿಕೊಂಡು ತಿಪ್ಪೆ ಸಾರಿಸುವ ಮಟ್ಟಕ್ಕೆ ಸಚಿವರು ಇಳಿದಿರುವುದು ನೀಚತನದ ಪರಮಾವಧಿ. ವ್ಯವಸ್ಥೆಯ ಸಮರ್ಪಕ ನಿರ್ವಹಣೆ ಕೊರತೆಯೇ ದುರಂತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೂ, ಹೊಣೆಗಾರಿಕೆಯಿಂದ ನುಣುಚಿಕೊಂಡು ಸಂವೇದನಾ ರಹಿತರಾಗಿ ಸಚಿವ ಜಾಜ್೯ ವರ್ತಿಸುತ್ತಿರುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.
ತನಿಖೆಗೆ ನಾಲ್ಕು ಸಮಿತಿ ರಚಿಸಿರುವುದಾಗಿ ಜಾರ್ಜ್ ಅವರೇ ಹೇಳಿದ್ದಾರೆ. ತನಿಖೆ ಮುಗಿದು ವರದಿ ಕೈ ಸೇರುವ ಮೊದಲೇ ಇಲಿ ನೆಪ ಹೇಳುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು? ತನಿಖೆಯ ಹಾದಿ ತಪ್ಪಿಸುವ ಯತ್ನ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ. ಹೀಗೆಯೇ ವರದಿ ನೀಡಲಿ ಎಂದು ಪರೋಕ್ಷವಾಗಿ ತನಿಖಾ ಸಮಿತಿಗಳ ಮೇಲೆ ಒತ್ತಡ ಹೇರಿದಂತೆ ಅಗುವುದಿಲ್ಲವೇ ಎಂದು ಪ್ರತಿಪಕ್ಷ ನಾಯಕ ಪ್ರಶ್ನಿಸಿದ್ದಾರೆ.
ಸಿಎಂ ಮಧ್ಯ ಪ್ರವೇಶಕ್ಕೆ ಆಗ್ರಹ : ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಈ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಅವರು ಮೌನ ವಹಿಸುವುದು ಸರಿಯಲ್ಲ. ತಕ್ಷಣವೇ ಮಧ್ಯ ಪ್ರವೇಶಿಸಿ ಸಚಿವ ಜಾಜ್೯ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಉನ್ನತ ಮಟ್ಟದ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.