ಬೆಳಗಾವಿ: ‘ಭಗವದ್ವೀತೆಯಿಂದ ಸಿಗುವ ಚಿತ್ ಸ್ವಾಸ್ಥ್ಯದ ಮೂಲಕ ಜಗತ್ತಿನ ಜಟಿಲ ಸಮಸ್ಯೆ ನಿವಾರಣೆ ಸಾಧ್ಯ’ ಎಂದು ಶಿರಸಿ ಸೋಂದಾ ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ತಿಳಿಸಿದರು.
ಇಲ್ಲಿನ ಸಂತ ಮೀರಾ ಶಾಲೆಯಲ್ಲಿ ಮಂಗಳವಾರ ರಾಜ್ಯಮಟ್ಟದ ಭವದ್ಗೀತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾನಾಡಿದ ಅವರು,’ಸ್ವಚ್ಛ ಮನಸ್ಸಿನ ತಳಹದಿ ಮೇಲೆ ವ್ಯಕ್ತಿತ್ವ ವಿಕಸನ, ನೈತಿಕ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯ ಎಂಬ ನಾಲ್ಕು ಕಂಬಗಳನ್ನು ನೆಟ್ಟು ಭಾರತ ಎಂಬ ಮಹಲ್ ನಿರ್ಮಿಸಬೇಕಿದೆ.
ಅದಕ್ಕೆ ಭಗವದ್ಗೀತೆ ಅಭಿಯಾನ ಕೈಗೊಳ್ಳಲಾಗಿದೆ’ ಎಂದರು.
‘ಗೀತೆಯಲ್ಲಿ ನಾಲ್ಕು ಪ್ರಕಾರದ ಯೋಗಗಳನ್ನು ಹೇಳಲಾಗಿದೆ. ಕರ್ಮ, ಜ್ಞಾನ, ಧ್ಯಾನ ಹಾಗೂ ಭಕ್ತಿ. ಇವು ಯೋಗಾಸನಗಳಲ್ಲ; ಮನುಷ್ಯನ ಬದುಕನ್ನು ಹಸನು ಮಾಡುವ ಯೋಗಗಳು. ಇವುಗಳನ್ನು ಪಾಲಿಸುವವರ ಮನಸ್ಸು, ದೇಹ, ಆಲೋಚನೆ ಎಲ್ಲವೂ ಶುದ್ಧವಾಗುತ್ತದೆ’ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ‘ಭಾರತದ ಆಚೆಗೆ ಕ್ರೈಸ್ತ ಮತ್ತು ಇಸ್ಲಾಂ ಮಾತ್ರ ಎರಡೇ ಪ್ರಧಾನ ಧರ್ಮಗಳು ಆಗಿವೆ. ಆದರೂ ಹೋರಾಟ ನಡೆದಿದೆ. ನಮ್ಮ ದೇಶದಲ್ಲಿ ಹಲವು ಧರ್ಮಗಳು, ಅಸಂಖ್ಯಾತ ಜಾತಿ-ಭಾಷೆಗಳಿವೆ. ಏಕತೆ ಸಾಧಿಸಿದ ಹಿರಿಮೆ ನಮ್ಮದು’ ಎಂದರು.