ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದಲ್ಲಿ ರೈತರೊಬ್ಬರ ಕಬ್ಬಿನ ಜಮೀನಿಗೆ ವಿದ್ಯುತ್ ತಗುಲಿ ಮಂಗಳವಾರ ಅಪಾರ ಪ್ರಮಾಣದ ಕಬ್ಬು ಸುಟ್ಟು ಕರಕಲಾಗಿದೆ.
ಗ್ರಾಮದ ರೈತ ಬಾಳಪ್ಪ ತುಕ್ಕನ್ನವರ ಅವರಿಗೆ ಸೇರಿದ ಸುಮಾರು ಆರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆಯಲಾಗಿತ್ತು. ಕಬ್ಬು ಕಟಾವಿಗೆ ಬಂದಿತ್ತು.
ಕಬ್ಬಿನ ಬೆಳೆಗೆ ತಾಗಿಕೊಂಡು ವಿದ್ಯುತ್ ಪ್ರಸರಣದ ತಂತಿಗಳು ಜೋತು ಬಿದ್ದಿದ್ದವು. ಜೋತು ಬಿದ್ದ ವಿದ್ಯುತ್ ತಂತಿಗಳನ್ನು ತೆರುವುಗೊಳಿಸುವಂತೆ ರೈತರು ಸಂಬಂಧಿಸಿದ ಹೆಸ್ಕಾಂ ಇಲಾಖೆಗೆ ಸಾಕಷ್ಟು ಮನವಿ ಮಾಡಿದ್ದರು. ಅಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಅಂದಾಜು ₹12 ಲಕ್ಷ ಹಾನಿ ಸಂಭವಿಸಿದೆ.
ಬೆಂಕಿಯ ಕಿನಾಲೆ ಹೊತ್ತಿ ಊರಿಯುತ್ತಿದ್ದಂತೆ ಪಕ್ಕದ ಜಮೀನಿನ ರೈತರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು.