Breaking News

ನಿಗಮ, ಮಂಡಳಿ ನೇಮಕಾತಿ ಗೊಂದಲ ಸಿಎಂ, ಡಿಸಿಎಂ ನಡುವೆ ಒಮ್ಮತ ಮೂಡಿಸಲು ಸುರ್ಜೇವಾಲ ಕಸರತ್ತು

Spread the love

ಬೆಂಗಳೂರು: ನಿಗಮ, ಮಂಡಳಿ ನೇಮಕಾತಿ ಗೊಂದಲ ಮುಂದುವರಿದಿದೆ. ಮಂಗಳವಾರ ತಡರಾತ್ರಿಯವರೆಗೆ ರಣದೀಪ್ ಸಿಂಗ್ ಸುರ್ಜೇವಾಲ ಖಾಸಗಿ ಹೊಟೇಲ್​ನಲ್ಲಿ ನಿಗಮ, ಮಂಡಳಿಗಳಿಗೆ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೊತೆ ಸಮಾಲೋಚಿಸಿದ್ದಾರೆ.

ಈ ಸಂದರ್ಭದಲ್ಲಿ ಸುರ್ಜೇವಾಲ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅಭಿಪ್ರಾಯ ಆಲಿಸಿದರು. ಸುದೀರ್ಘವಾಗಿ ಚರ್ಚಿಸಿದರೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ನಿಗಮ, ಮಂಡಳಿ ನೇಮಕಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ತೀವ್ರಗೊಂಡಿದೆ. ಇನ್ನೊಂದೆಡೆ, ಇಬ್ಬರು ನಾಯಕರಲ್ಲಿ ಒಮ್ಮತ ಮೂಡಿಸಲು ಪಕ್ಷದ ಹಿರಿಯ ನಾಯಕರು ಹರಸಾಹಸಪಡುತ್ತಿದ್ದಾರೆ.

ಸಿದ್ದರಾಮಯ್ಯ ಮೊದಲು ಶಾಸಕರನ್ನು ನಿಗಮ‌, ಮಂಡಳಿಗೆ ನೇಮಿಸುವಂತೆ ಒತ್ತಾಯಿಸುತ್ತಿದ್ದರೆ, ಡಿಕೆಶಿ ಪಕ್ಷದ ಕಾರ್ಯಕರ್ತರಿಗೆ ನೇಮಕಾತಿಯಲ್ಲಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಡಿಕೆಶಿ 70:30 ಅನುಪಾತದಲ್ಲಿ ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರಿಗೆ ನಿಗಮ, ಮಂಡಳಿಯಲ್ಲಿ ಸ್ಥಾನ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಸಿದ್ದರಾಮಯ್ಯ ಹೇಳುವುದೇನು?: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಗಮ, ಮಂಡಳಿಯಲ್ಲಿ ಶಾಸಕರಿಗೆ ಆದ್ಯತೆ ಕೊಡುವುದು ಒಳ್ಳೆಯದು. ಶಾಸಕರಿಗೆ ಅವಕಾಶ ನೀಡಿದರೆ ಪಕ್ಷ, ಸರ್ಕಾರದಲ್ಲಿ ಗೊಂದಲಕ್ಕೆ ತೆರೆ ಎಳೆದಂತಾಗಲಿದೆ. ಕನಿಷ್ಠ 25 ಜನ ಶಾಸಕರಿಗೆ ಮೊದಲ ಪಟ್ಟಿಯಲ್ಲಿ ಅವಕಾಶ ನೀಡಬೇಕು. ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡುವುದು ಒಳಿತು. ಇರುವ ಸೀಮಿತ ಅವಕಾಶಗಳಲ್ಲಿ ಎಲ್ಲಾ ಕಾರ್ಯಕರ್ತರಿಗೂ ಕೊಡುವುದು ಕಷ್ಟ ಸಾಧ್ಯ. ಒಂದೊಂದು ನಿಗಮ, ಮಂಡಳಿಗೆ ಐವರು ಆಕಾಂಕ್ಷಿಗಳಿದ್ದಾರೆ. ಹೀಗಿರುವಾಗ ಒಬ್ಬರಿಗೆ ಕೊಟ್ಟು ಮತ್ತೊಬ್ಬರಿಗೆ ಕೊಡದಿದ್ದರೆ ಅಸಮಾಧಾನಕ್ಕೆ ನಾವೇ ಮಣೆ ಹಾಕಿದಂತಾಗಲಿದೆ. ಎಂಪಿ ಚುನಾವಣೆಗೂ ಮುನ್ನ ಶಾಸಕರಿಗೆ ನೀಡಿ ನಂತರ ಕಾರ್ಯಕರ್ತರಿಗೆ ಹಂಚೋಣ ಎಂಬುದು ಸಿಎಂ ವಾದ.

ಡಿ.ಕೆ.ಶಿವಕುಮಾರ್ ಹೇಳುವುದೇನು?: ಶಾಸಕರ ಜೊತೆಗೆ ಕಾರ್ಯಕರ್ತರನ್ನೂ ನಿಗಮ, ಮಂಡಳಿ ನೇಮಕಾತಿಗೆ ಪರಿಗಣಿಸಬೇಕು‌. ಶಾಸಕರಿಗೆ ಮಾತ್ರ ಕೊಟ್ಟು ಕಾರ್ಯಕರ್ತರಿಗೆ ಕೊಡದಿದ್ದರೆ ತಪ್ಪು ಸಂದೇಶ ರವಾನೆಯಾಗಲಿದೆ.‌ ಎಲ್ಲಾ ಕಾರ್ಯಕರ್ತರಿಗೆ ಅಲ್ಲದೆ ಇದ್ದರೂ ಕೆಲ ಕಾರ್ಯಕರ್ತರನ್ನು ಮೊದಲ ಹಂತದಲ್ಲಿ ನೇಮಕಾತಿ ಮಾಡಬೇಕು. ಕನಿಷ್ಠ 10-15 ಕಾರ್ಯಕರ್ತರನ್ನಾದರೂ ನೇಮಕ ಮಾಡಬೇಕು. ಕಾರ್ಯಕರ್ತರಿಗೆ ಅವಕಾಶ ನೀಡದೇ ಇದ್ದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಅಸಮಾಧಾನ ತೀವ್ರಗೊಂಡು ಚುನಾವಣೆಯಲ್ಲಿ ಕಾರ್ಯಕರ್ತರು ಅಸಹಕಾರ ತೋರಬಹುದು. ಈಗಾಗಲೇ ಕಾರ್ಯಕರ್ತರು ಶಾಸಕರಿಗೆ ನಿಗಮ, ಮಂಡಳಿಗಳಲ್ಲಿ ಅವಕಾಶ ನೀಡಬಾರದು. ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಕಾರ್ಯಕರ್ತರಿಗೂ ಮೊದಲ ಹಂತದಲ್ಲಿ ನೇಮಕಾತಿಯಲ್ಲಿ ಅವಕಾಶ ನೀಡಲೇ ಬೇಕು ಎನ್ನುವುದು ಡಿಕೆಶಿ ವಾದವಾಗಿದೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ