ಹಾಸನ: ತನ್ನಿಂದ ದೂರಾಗುತ್ತಿದ್ದಾಳೆ ಎಂದು ಕೋಪಗೊಂಡ ಪ್ರಿಯಕರನೋರ್ವ ತನ್ನ ಪ್ರಿಯತಮೆಯನ್ನು ಭೀಕರವಾಗಿ ಕೊಲೆಗೈದ ಘಟನೆ ಗುರುವಾರ ಹಾಸನದಲ್ಲಿ ನಡೆದಿದೆ.
ಆಲೂರು ತಾಲ್ಲೂಕಿನ ಕವಳಿಕೆರೆ ನಿವಾಸಿ ಸುಚಿತ್ರ (20) ಸಾವನ್ನಪ್ಪಿದ್ದಾರೆ. ಹಾಸನ ತಾಲ್ಲೂಕಿನ ಶಂಕರನಹಳ್ಳಿಯ ನಿವಾಸಿ ತೇಜಸ್ ಕೊಲೆ ಆರೋಪಿ.
ಪ್ರಕರಣದ ವಿವರ: ಮೊಸಳೆ ಹೊಸಹಳ್ಳಿ ಗ್ರಾಮದ ಹೊರಭಾಗದಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಬ್ಬರು ಬಿಇ ವ್ಯಾಸಂಗ ಮಾಡುತ್ತಿದ್ದರು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಕೆಲ ದಿನಗಳಿಂದ ಇಬ್ಬರ ಪ್ರೀತಿಯಲ್ಲಿ ಬಿರುಕು ಮೂಡಿದೆ. ಇದರಿಂದ ಕೋಪಗೊಂಡ ಯುವಕ ಗುರುವಾರ, ನಿನ್ನೊಂದಿಗೆ ಮಾತನಾಡಬೇಕು ಎಂದು ಯುವತಿಗೆ ತಿಳಿಸಿದ್ದಾನೆ. ಈ ಮಾತು ನಂಬಿ ಆಗಮಿಸಿದ ಯುವತಿಯನ್ನು ತಾಲ್ಲೂಕಿನ ಕುಂತಿಗುಡ್ಡಕ್ಕೆ ಕರೆದೊಯ್ದು, ಕೆಲಕಾಲ ಮಾತುಕತೆ ನಡೆಸಿದ್ದಾನೆ. ತನ್ನ ಮಾತಿಗೆ ಒಪ್ಪದ ಯುವತಿಯನ್ನು ಕೋಪದಿಂದ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7