ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಅಪೇಕ್ಷೆ ಇದೆ. ರಾಜ್ಯ ಕಾಂಗ್ರೆಸ್ ಕೂಡ ಅದಕ್ಕೆ ಪೂರಕವಾಗಿ ಸಿದ್ಧತೆ ನಡೆಸಿದೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಲಿಂಗಾಯತ ಮತ್ತು ಕುರುಬ ಸಮುದಾಯಗಳ ಮತ ಸೆಳೆಯುವ ಯತ್ನ ನಡೆಯುತ್ತಿದೆಯಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, “ಎಲ್ಲ ಸಮುದಾಯವನ್ನು ನಾವು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇವೆ. ಇನ್ನು ಪುತ್ರ ಚಿದಾನಂದ ಸವದಿ ಹೆಸರು ಲೋಕಸಭೆಗೆ ಕೇಳಿ ಬರುತ್ತಿರುವ ಬಗ್ಗೆ ನಮ್ಮಲ್ಲಿ ಅಭ್ಯರ್ಥಿ ಆಯ್ಕೆಗೆ ಸಭೆ ಮತ್ತು ಚರ್ಚೆ ಆಗಿಲ್ಲ. ಎಲ್ಲವೂ ಕೂಡ ಊಹಾಪೋಹಗಳಷ್ಟೇ. ಅಂತಹ ಸನ್ನಿವೇಶ ನಮ್ಮ ಮುಂದೆ ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆ 28 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸವದಿ, ಚುನಾವಣೆ ಬರಲಿ ಯಾರ್ಯಾರು ಎಷ್ಟೆಷ್ಟು ಗೆಲ್ತಾರೆ ಅಂತ ನೋಡೋಣ. ಉಪಚುನಾವಣೆಗಳೇ ಬೇರೆ ಸಾರ್ವತ್ರಿಕ ಚುನಾವಣೆಯೇ ಬೇರೆ. ಉಪಚುನಾವಣೆ ಕೇವಲ ಬಿಂದಿಗೆಯಲ್ಲಿನ ನೀರು ತೆಗೆದ ಹಾಗೆ. ಸಾರ್ವತ್ರಿಕ ಚುನಾವಣೆ ಸಮುದ್ರದಲ್ಲಿನ ನೀರು ತೆಗೆದ ಹಾಗೆ” ಎಂದು ಟಾಂಗ್ ನೀಡಿದ್ದಾರೆ.