ಬೆಂಗಳೂರು: ನನ್ನ ರಾಜಕೀಯ ಜೀವನದಲ್ಲಿ ಹಣಕ್ಕಾಗಿ ಒಂದೇ ಒಂದು ವರ್ಗಾವಣೆಯನ್ನು ಮಾಡಿರುವುದನ್ನು ತೋರಿಸಿದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೋವನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಕುರಿತಂತೆ ಸಿಎಂ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಶಾಲಾ ಕಟ್ಟಡಗಳನ್ನು ಸಿ.ಎಸ್.ಆರ್. ನಿಧಿಯಿಂದ ನಿರ್ಮಿಸಲಾಗುತ್ತಿದೆ. ಸಚಿವ ಹೆಚ್.ಸಿ.ಮಹದೇವಪ್ಪ ಅವರು ಅದನ್ನು ಪಟ್ಟಿಯಲ್ಲಿ ನೀಡಿದ್ದಾರೆ. ಪಟ್ಟಿಯಲ್ಲಿ ಐದು ಹೆಸರು ಇದ್ದರೆ ಅದು ವರ್ಗಾವಣೆಯಾಗುತ್ತದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ವಿದ್ಯುತ್ ಕಳ್ಳತನ ಪ್ರಕರಣ ಮುಚ್ಚಿಹಾಕಲು ಯತೀಂದ್ರನ ಮೇಲೆ ವರ್ಗಾವಣೆ ಆರೋಪ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಮಾಜಿ ಪ್ರಧಾನಿ ಮಗನಾಗಿ ಅಕ್ರಮವಾಗಿ ವಿದ್ಯುತ್ ತೆಗೆದುಕೊಂಡು ಮನೆ ಬೆಳಗಿಸಿರುವುದು ಅಪರಾಧವಲ್ಲವೇ?. ಅದನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿದ್ದಾರೆ. ಸಾಕ್ಷಿ ಇಲ್ಲದೆ ಕುಮಾರಸ್ವಾಮಿ ಏನು ಬೇಕಾದರೂ ಹೇಳಬಹುದಾ?. ಯಾರೇ ತಪ್ಪು ಮಾಡಿದರೂ ಎಫ್.ಐ.ಆರ್ ಆಗಬೇಕು. ಅದನ್ನು ಮುಚ್ಚಿಹಾಕಲು ಹೀಗೆ ಹೇಳುತ್ತಿದ್ದಾರೆ. ಅದು ಸಿಎಸ್‌ಆರ್ ಲಿಸ್ಟ್. ಶಾಲಾ ಕಟ್ಟಡಗಳನ್ನು ಸಿಎಸ್‌ಆರ್ ಫಂಡ್ನಿಂದ ರಿಪೇರಿ ಮಾಡಿಸಲಾಗುತ್ತಿದೆ. ಅದರ ಬಗ್ಗೆ ಯತೀಂದ್ರ ಮಾತನಾಡಿದ್ದಾರೆ. ಯತೀಂದ್ರ ವರ್ಗಾವಣೆ ಬಗ್ಗೆ ಮಾತಾಡಿಲ್ಲ. ಸಿಎಸ್‌ಆರ್ ಫಂಡ್ ಬಗ್ಗೆ ಮಾತಾಡಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆ ದಂಧೆ ಮಾಡಿಲ್ಲ ಎಂದು ಸಿಎಂ ಹೇಳಿದರು.