ಹುಬ್ಬಳ್ಳಿ:ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಗಳಿಸಿರುವ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಬೆಳೆಯುತ್ತಲೇ ಇದೆ. ಆದ್ರೆ ನಗರದಲ್ಲಿ ಉಸಿರಾಡಲು ಸ್ವಚ್ಛ ಗಾಳಿ ಸಿಗದಂತಾಗಿದೆ. ಅವಳಿ ನಗರದಲ್ಲಿ ಧೂಳಿನ ಸಮಸ್ಯೆಯಿಂದ ಜನರು ಹೈರಾಣ ಆಗಿದ್ದಾರೆ. ಅವಳಿ ನಗರದಲ್ಲಿ ಧೂಳು ಹೆಚ್ಚಾಗಿರುವ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಜನರಿಗೆ ವಿವಿಧ ಅಲರ್ಜಿಗಳು ಕಾಡುತ್ತಿವೆ. ಹೀಗಾಗಿ ಅವಳಿನಗರ ಧೂಳುಮುಕ್ತ ಮಾಡಲು ಹಾಗೂ ಧೂಳು ತೆಗೆಯಲು ಈಗ ಪಾಲಿಕೆ ನಿರ್ಧಾರವೊಂದನ್ನು ತೆಗೆದುಕೊಂಡಿದೆ.
ಧೂಳು ನಿಯಂತ್ರಣ ಮಾಡುವ ಹಾಗೂ ಕಸ ಗೂಡಿಸುವ ಹಳೆಯ ಯಂತ್ರಗಳು ಶೆಡ್ನಲ್ಲಿ ತುಕ್ಕು ಹಿಡಿದಿವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಬೆಳೆದಂತೆ ಧೂಳಿನ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳುತ್ತಿದೆ. ಧೂಳು ನಿಯಂತ್ರಣ ಮಾಡುವ ಹಾಗೂ ಕಸ ಗೂಡಿಸುವ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ. ಇದರಿಂದಾಗಿ ಪಾಲಿಕೆ ಈಗ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಎರಡು ಮಷಿನ್ ಖರೀದಿಗೆ ಮುಂದಾಗಿದೆ.
ದುಂದು ವೆಚ್ಚ: ಹು-ಧಾ ಮಹಾನಗರವನ್ನು ಧೂಳು ಮುಕ್ತ ನಗರವನ್ನಾಗಿ ಮಾಡಲು 2.96 ಕೋಟಿ ವೆಚ್ಚದಲ್ಲಿ ಧೂಳು ತೆಗೆಯುವ ಎರಡು ಯಂತ್ರಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ. ಆದರೆ ಈ ಹಿಂದೆ ಇದ್ದ ಮಷಿನ್ ನಿಂತ ಜಾಗದಲ್ಲಿಯೇ ನಿಂತು ತುಕ್ಕು ಹಿಡಿದಿವೆ. ಹೀಗಿದ್ದರೂ ಪಾಲಿಕೆ ಈಗ ಮತ್ತೊಮ್ಮೆ ದುಂದು ವೆಚ್ಚಕ್ಕೆ ಮುಂದಾಗಿದೆ.
ಕೇಂದ್ರದಿಂದ ಪಾಲಿಕೆಗೆ 20 ಕೋಟಿ ಅನುದಾನ ಮಂಜೂರು: ಅವಳಿ ನಗರದಲ್ಲಿ ಧೂಳಿನ ಪ್ರಮಾಣ 2.5 ದಿಂದ 10 ಎಂ ಎಂ ಇದ್ದು ಇದು ನೇರ ಶ್ವಾಸಕೋಸಕ್ಕೆ ಹೋಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಮಹಾನಗರ ಪಾಲಿಕೆಗೆಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧಗಾಳಿ ಯೋಜನೆ(NCAP) ಅಡಿ ಪಾಲಿಕೆಗೆ 20 ಕೋಟಿ ಅನುದಾನ ಮಂಜೂರಾಗಿದೆ. ಮಾಲಿನ್ಯ ನಿಯಂತ್ರಣ ಯೋಜನೆಗೆ ಬಳಸಿಕೊಳ್ಳಬೇಕಿದ್ದು, ಜಿಲ್ಲಾಧಿಕಾರಿ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ.