ಮಂಡ್ಯ: ಹಾಡ ಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ಹಣ ಎಗರಿಸಿ ಕಳ್ಳರು ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ.
ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡವರು. ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ ಎಸ್ಬಿಐ ಬ್ಯಾಂಕ್ಗೆ ಕೆಲಸದ ನಿಮಿತ್ತ ಹೋಗಿದ್ದರು. ಕಾರಿನಲ್ಲಿ ಹಣವಿಟ್ಟಿದ್ದನ್ನು ಗಮನಿಸಿದ ಖತರ್ನಾಕ್ ಕಳ್ಳರು ಕಾರಿನ ಗಾಜು ಒಡೆದು ಹಣ ದೋಚಿದ್ದಾರೆ.
ಪರಮೇಶ್ ರಿಜಿಸ್ಟರ್ ಕಚೇರಿಯಲ್ಲಿ ಜಮೀನು ರಿಜಿಸ್ಟರ್ ಮಾಡಿಸಿ ಹಣ ಪಡೆದು ನಗರಸಭೆ ಬಳಿ ಬಂದಿದ್ದರು. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕಾರಿನಲ್ಲಿದ್ದ ಹಣವನ್ನು ಕಳ್ಳರು ಎಗರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
ಹಣ ಕಳೆದುಕೊಂಡ ಪರಮೇಶ್ ಮಾತನಾಡಿ, “ನಾನು ಕಾರು ನಿಲ್ಲಿಸಿ ಸ್ವಲ್ಪ ಕೆಲಸ ಇದೆ ಎಂದು ಬ್ಯಾಂಕ್ಗೆ ಹೋಗಿದ್ದೆ. ಬ್ಯಾಂಕ್ನಿಂದ ಹಿಂತಿರುಗಿ ಬರುವಷ್ಟರಲ್ಲಿ ಕಾರಿನಲ್ಲಿದ್ದ ನಾಲ್ಕೂವರೆ ಲಕ್ಷ ಹಣ ಕಳವಾಗಿದೆ. ಇದು ಜಮೀನು ಮಾರಿದ ಹಣ, ಬ್ಯಾಂಕಿನವರು ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಕಳ್ಳರು ಕಾರಿನ ಗಾಜು ಒಡೆದು ಈ ಕೃತ್ಯ ಎಸಗಿದ್ದಾರೆ” ಎಂದರು.