ಹುಬ್ಬಳ್ಳಿ: ಹೊಸ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಪ್ರಕ್ರಿಯೆ ಇಂದಿನಿಂದಲೇ ಆರಂಭಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ಗೆ ಈವರೆಗೆ 2 ಲಕ್ಷ 90 ಸಾವಿರ ಅರ್ಜಿಗಳು ಬಂದಿವೆ. ಇದರಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ಅರ್ಜಿ ಪರಿಷ್ಕರಣೆ ಮಾಡಿ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುವುದು. ಈಗಾಗಲೇ ಅರ್ಜಿ ಹಾಕಿಕೊಂಡು ಕಾಯುತ್ತಿರುವ ಜನರಿಗೆ ಆದಷ್ಟು ಬೇಗ ಕಾರ್ಡ್ ವಿತರಣೆ ಮಾಡುವುದು ನಮ್ಮ ಆದ್ಯತೆ ಎಂದು ಹೇಳಿದರು.
ಅನರ್ಹರು ಬಿಪಿಎಲ್ ಕಾರ್ಡ್ ಹೊಂದಿರುವವರ ಕಾರ್ಡ್ ರದ್ದತಿ ಪ್ರಕ್ರಿಯೆ ನಡೆಯುತ್ತಿದೆ. ಅದೇ ರೀತಿ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಜಾಲಕ್ಕೆ ಕಡಿವಾಣ ಹಾಕಲು ಅಧಿಕಾರಿಗಳ ತಂಡ ಕ್ರಮ ಜರುಗಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಸ್ವಲ್ಪ ಸಮಯಾವಕಾಶ ತೆಗೆದುಕೊಳ್ಳುತ್ತದೆ ಎಂದರು.
ಅಕ್ಕಿ ತರುವ ಪ್ರಯತ್ನ: ನಾನು ಸಚಿವನಾದ ಮೇಲೆ ಮೊದಲ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದೇನೆ. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ನಾವು ನುಡಿದಂತೆ ನಡೆದಿದ್ದೇವೆ. ಹಸಿವಿನಿಂದ ಬಳಲಬಾರದು ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿ ಮಾಡಿದರು. ಚುನಾವಣೆಗೆ ಮುನ್ನ ನಾವು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದೆವು, ಆದರೆ ಕೇಂದ್ರ ಸರ್ಕಾರ ಅಕ್ಕಿ ಇದ್ದರೂ, ಕೊಡಲು ನಿರಾಕರಣೆ ಮಾಡಿದರು. ಇದರಲ್ಲಿ ರಾಜಕೀಯ ಬೆರೆಸಬಾರದಿತ್ತು. ಆದರೆ ಕೇಂದ್ರ ಸರ್ಕಾರ ಇಲ್ಲಿ ರಾಜಕಾರಣ ಮಾಡಿತು. ನಾವು ಅದಕ್ಕೆ ಸರಿಸಮಾನವಾಗಿ ಜುಲೈನಿಂದ ಹಣ ಕೊಡುತ್ತಿದ್ದೇವೆ ಎಂದು ತಿಳಿಸಿದರು.