ಬೆಂಗಳೂರು: ರಾಜ್ಯದಲ್ಲಿ ಬರ ಅಧ್ಯಯನಕ್ಕಾಗಿ ಬಿಜೆಪಿ ಮಾದರಿಯಲ್ಲಿಯೇ ತಂಡ ರಚಿಸಿಕೊಂಡು ಜೆಡಿಎಸ್ ಸಹ ಅಧ್ಯಯನ ನಡೆಸಲು ತೀರ್ಮಾನಿಸಿದ್ದು, ಈ ಸಂಬಂಧ ಇಂದು ಸಭೆ ನಡೆಸಲಿದೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಸಿಎಂ, ಪಕ್ಷದ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ಜಿಲ್ಲಾವಾರು, ವಿಭಾಗವಾರು ಸಭೆ ನಡೆಯಲಿದೆ.
ರಾಜ್ಯದಲ್ಲಿನ ಬರ ಅಧ್ಯಯನಕ್ಕೆ ಬಿಜೆಪಿ ನಿರ್ಧರಿಸಿ ತಂಡ ರಚಿಸಿದೆ. ಈ ಬೆನ್ನಲ್ಲೇ ಜೆಡಿಎಸ್ ಸಹ ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಹೋರಾಟ ರೂಪಿಸುವ ಕುರಿತು ಇಂದು ಮಹತ್ವದ ಸಭೆ ಕರೆದಿದೆ.
ಮಳೆ ಬೆಳೆ ಸ್ಥಿತಿಗತಿ, ಕುಡಿಯುವ ನೀರಿನ ಸಮಸ್ಯೆ, ಬೆಳೆ ನಷ್ಟ ಪರಿಹಾರ ನೀಡುವಲ್ಲಿ ಸರ್ಕಾರದ ನಿರ್ಲಕ್ಷ್ಯ ಕುರಿತು ದಳ ನಾಯಕರು ಚರ್ಚಿಸಲಿದ್ದಾರೆ. ಜೊತೆಗೆ ಬರ ಅಧ್ಯಯನಕ್ಕಾಗಿ ತಂಡ ರಚನೆ ಮಾಡಿ ಸರ್ಕಾರದ ವಿರುದ್ಧ ಯಾವ ರೀತಿ ಹೋರಾಟ ರೂಪಿಸಬಹುದು ಎಂಬುದರ ಬಗ್ಗೆಯೂ ಚರ್ಚೆ ನಡೆಯಲಿದೆ. ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ, ಶಾಸಕರು ಮಾಜಿ ಸಚಿವರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು ಸೇರಿದಂತೆ ವಿವಿಧ ಘಟಕಗಳ ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ.