ಕೊಡಗು: ಪಕ್ಷದಲ್ಲಿ ಉದ್ಬವಿಸಿರುವ ಸಮಸ್ಯೆಯನ್ನು ಹೈ-ಕಮಾಂಡ್, ಪಕ್ಷದ ಅಧ್ಯಕ್ಷರು, ಸಿಎಂ ತೀರ್ಮಾನ ಮಾಡ್ತಾರೆ. ಅದು ನಮ್ಮ ಕೆಲಸ ಅಲ್ಲ. ಸಣ್ಣಪುಟ್ಟ ಅಸಮಾಧಾನ ಎಲ್ಲಾ ಕಡೆ ಇರುತ್ತೆ ಅದನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕೆ ಇದೆ ಎಂದು ಸಚಿವ ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
ಮುಂದಿನ ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಂಬಂಧಿಸಿದಂತೆ ಕೃಷಿ ಸಚಿವ ಚೆಲುವರಾಯ ಸ್ವಾಮಿ ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ, ಮುಸ್ಲಿಂ ಸಮುದಾಯದ ಮತದಿಂದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ ಎಂಬ ಜಮೀರ್ ಅಹ್ಮದ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆಯೂ ಉತ್ತರಿಸಿದ ಅವರು ಎಲ್ಲ ಸಮುದಾಯದ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದ ಆರು ಕೋಟಿ ಜನರಿಗೂ ಅಭಿನಂದನೆ ಸಲ್ಲಿಸಿದ್ದೇವೆ. ಅವರವರ ಕಮ್ಯುನಿಟಿ ಬಗ್ಗೆ ಅವರು ಹೇಳೋದರಲ್ಲಿ ತಪ್ಪಿಲ್ಲ ಎಂದ ತಿಳಿಸಿದರು.
ವೈಜ್ಞಾನಿಕ ಕೃಷಿಯಿಂದ ರೈತರ ಆರ್ಥಿಕಾಭಿವೃದ್ಧಿ ಸಾಧ್ಯ : ವೈಜ್ಞಾನಿಕ ಕೃಷಿ ,ಸಮರ್ಪಕ ಯಾಂತ್ರೀಕರಣ, ಸಮಗ್ರ ಬೇಸಾಯ ಅರಿತು ಕೃಷಿ ಮಾಡಿದರೆ ರೈತರ ಆರ್ಥಿಕಾಭಿವೃದ್ಧಿ ಸಾಧಿಸಲು ಸಾಧ್ಯವಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಶ್ರಯದಲ್ಲಿ ಮೂರು ದಿನ ಕಾಲ ನಡೆದ ಕೃಷಿ ಯಂತ್ರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಾಮಾನ್ಯರು, ಕೃಷಿಕರ ಶ್ರೇಯೋಭಿವೃದ್ದಿಯೇ ನಮ್ಮ ಸರ್ಕಾರದ ಮೊದಲ ಆದ್ಯತೆ ಎಂದ ಅವರು, ರಾಜ್ಯದ ಸರ್ಕಾರ ಕೃಷಿಕರ ಅನುಕೂಲಕ್ಕಾಗಿ 600ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರಗಳನ್ನು ತೆರದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಕೃಷಿಗೆ ಸಂಬಂಧಿತ ಯಾಂತ್ರೀಕರಣ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ 50 ಕೋಟಿ ಮೀಸಲಿರಿಸಲಾಗಿದೆ. 70:30ರ ಸಹಾಯಧನ- ಬಂಡವಾಳ ಹೂಡಿಕೆ ಅನುಪಾತದಲ್ಲಿ ರೈತರು ಆರಂಭಿಸಬಹುದಾಗಿದೆ. ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯೂ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ತಾಂತ್ರಿಕತೆ ಬಳಕೆಯ ಶಿಕ್ಷಣ ನೀಡುತ್ತಿರುವುದು ಹಾಗೂ ಕೃಷಿಗೆ ಪೂರಕವಾದ ಯಂತ್ರ ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.