ಹುಬ್ಬಳ್ಳಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ವಿವಾಹಿತ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟಿಲಿಂಗೇಶ್ವರ ನಗರದಲ್ಲಿ ನಡೆದಿದೆ. ನಿಖಿಲ್ ಕುಂದಗೋಳ (28) ಮನೆಯಲ್ಲೆ ಆತ್ಮಹತ್ಯೆಗೆ ಶರಣಾದ ಯುವಕ.
ಮೃತ ನಿಖಿಲ್ ಪ್ರೀತಿ ಎಂಬ ಯುವತಿಯನ್ನು ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದ.
ಆದರೆ, ಕಳೆದ ಕೆಲ ತಿಂಗಳಿಂದ ಪತಿ ಹಾಗೂ ಪತ್ನಿಯ ನಡುವೆ ವಿರಸ ಮೂಡಿದ್ದು, ನಿತ್ಯ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಪರಿಣಾಮ ಪತ್ನಿ ಪ್ರೀತಿ ನಿಖಿಲ್ ಕಿರುಕುಳ ನೀಡಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇಲೆ ಕೇಶ್ವಾಪುರ ಪೊಲೀಸರು ನಿಖಿಲ್‌ನನ್ನು ಕರೆಸಿ ವಿಚಾರಣೆ ನಡೆಸಿದ್ದರು. ಬಳಿಕ ನಿಖಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ ಕುರಿತು ಟ್ವಿಟ್ ಮಾಡಿರುವ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು, ಠಾಣೆಯಲ್ಲಿ ಸ್ವೀಕೃತವಾಗಿದ್ದ ಅರ್ಜಿ ಸಂಬಂಧ ನೋಟಿಸ್ ಜಾರಿ ಮಾಡಿ ವಿಚಾರಣೆಗಾಗಿ ಠಾಣೆಗೆ ಕರೆಯಿಸಲಾಗಿತ್ತು. ಪ್ರಕರಣದ ಎದರುಗಾರರು ಮತ್ತು ದೂರುದಾರರು ಪರಸ್ಪರ ಬಗೆಹರಿಸಿಕೊಳ್ಳುವುದಾಗಿ ಕೈಬರಹದಲ್ಲಿ ಬರೆದುಕೊಟ್ಟು ಹೋಗಿರುತ್ತಾರೆ ಎಂದಿದ್ದಾರೆ.